ವಿಜಯಪುರ: ಪೊಲೀಸ್ ಗುಂಡೇಟಿಗೆ ಗಾಯಗೊಂಡಿದ್ದ ರೌಡಿಶೀಟರ್ ಬಲಿ
ವಿಜಯಪುರ: ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸುವ ವೇಳೆ ಪೊಲೀಸ್ ಅಧಿಕಾರಿಗಳು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ರೌಡಿ ಶೀಟರ್ ಗೆ ತಗುಲಿದ್ದು, ತೀವ್ರ ಗಾಯಗೊಂಡಿದ್ದ ಆತ ಮೃತಪಟ್ಟ ಘಟನೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಯೂನುಸ್ ಅಖ್ಲಾಕ್ ಪಟೇಲ್ (35) ಗುಂಡೇಟಿಗೆ ಬಲಿಯಾದ ರೌಡಿ ಶೀಟರ್. ಈತ ನಗರದ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ 25 ಸಾವಿರ ರೂ. ಹಣ ಹಾಗೂ ಆತನ ಸ್ಕೂಟಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಯೂನುಸ್ ನ ಬಂಧನಕ್ಕೆ ಕ್ರಮ ವಹಿಸಿದ್ದರು.
ಶನಿವಾರ ಆರೋಪಿಯು ತನ್ನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ರಾಂಪೂರ ಬಳಿ ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ, ಆರೋಪಿ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಪ್ರದೀಪ್ ತಳಕೇರಿ ಆಯತಪ್ಪಿ ಬಿದ್ದಿದ್ದು, ಆರೋಪಿಗೆ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಆರೋಪಿ ಪೊಲೀಸರಿಗೆ ಶರಣಾಗದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಗಾಯಗೊಂಡಿದ್ದ ಆರೋಪಿಗೆ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಆರೋಪಿ ಯೂನುಸ್ ವಿರುದ್ಧ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.