ಹುಬ್ಬುರ್ರಸೂಲ್ ಕಾರ್ಯಕ್ರಮ ಆಯೋಜಿಸಿದ EIFF

Update: 2015-12-31 16:41 GMT

. ದುಬೈ, ಡಿ. 25: ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಂ ದುಬೈ ವಲಯವು ಅನಿವಾಸಿ ಭಾರತೀಯರಿಗಾಗಿ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಪ್ರವಾದಿ ಜೀವನ ಸಂದೇಶವನ್ನು ಸಾರುವ ಹುಬ್ಬುರ್ರಸೂಲ್ ಕಾರ್ಯಕ್ರಮವು ಡಿಸೆಂಬರ್ 25 ರಂದು ದುಬೈ ಅಲ್ ಮುಸಲ್ಲ ಟವರಿನಲ್ಲಿ ಜರಗಿತು. ಪವಿತ್ರ ಗ್ರಂಥವಾದ ಕುರಾನ್ ಅನ್ನು ಪಠಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಂ ಯುಎಇ ಇದರ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಶೀದ್, ಜನಾಬ್ ಅಬ್ದುಲ್ ಮಜೀದ್ ಹಾಗೂ ಎಮಿರೇಟ್ಸ್ ಇoಡಿಯ ಫ್ರಟರ್ನಿಟಿ ಫಾರಂ ಯು ಎ ಇ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಜನಾಬ್ ಫರಾಝ್ ಬ್ರಹ್ಮಾವರ ಮೊದಲಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ತಿತರಿದ್ದರು. ಪ್ರಾಸ್ತಾವಿಕ ಭಾಷಣಗೈದ ಜನಾಬ್ ಅಬ್ದುಲ್ ರಶೀದ್, ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಂ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉದ್ಯೋಗ ಅರಸಿಕೊಂಡು ಬರುತ್ತಿರುವ ಭಾರತೀಯರಿಗೆ ಉದ್ಯೋಗದ ವ್ಯವಸ್ಥೆ ಮೊದಲಾದ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಪ್ರವಾದಿ ಮುಹಮ್ಮದ್ (ಸ.ಅ) ರವರ ಜೀವನ ಶೈಲಿ ಹಾಗು ಆಡಳಿತ ವೈಖರಿಯ ಕುರಿತು ದಿಕ್ಸೂಚಿ ಭಾಷಣ ಮಾಡಿದ ಜನಾಬ್ ಅಬ್ದುಲ್ ಮಜೀದ್, ಸಮಾನತೆಯನ್ನು ಜಗತ್ತಿಗೆ ಸಾರಿದ, ವರ್ಣಭೇಧಕ್ಕೆ ತಿಲಾಂಜಲಿ ಹೇಳಿದ, ಬಡವ ಶ್ರೀಮಂತನೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಹಕ್ಕನ್ನು ಪ್ರತಿಪಾದಿಸಿದ, ಶಾಂತಿಯ ಪ್ರತೀಕ ಪ್ರವಾದಿ ಮುಹಮ್ಮದ್ (ಸ.ಅ) ರವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕೆಂದು, ಆ ಮುಖಾಂತರ ಇಂದು ಭಾರತ ಹಾಗು ಪ್ರಪಂಚದ ಕೆಲವೊಂದು ಭಾಗಗಳಲ್ಲಿ ತಾಂಡವಾಡುತ್ತಿರುವ ಅಸಹಿಷ್ಣುತೆಯನ್ನು ನೀಗಿಸಲು ಸಾಧ್ಯವೆಂದು ಬಣ್ಣಿಸಿದರು. ನೂರಾರು ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮವನ್ನು ಜನಾಬ್ ಇರ್ಫಾನ್ ಎರ್ಮಾಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News