ಪ್ರಸ್ತುತ ಪಾಕ್ಷಿಕ ದಶಮಾನೋತ್ಸವ ದಮಾಮ್ : ಸಂಭ್ರಮದ ಹತ್ತರ ಹರುಷ - ಪ್ರಸ್ತುತ ಓದುಗರ ಸಂಜೆ

Update: 2016-01-04 08:49 GMT

ದಮಾಮ್: ಪ್ರಸ್ತುತ ಪಾಕ್ಷಿಕ ದಶಮಾನೋತ್ಸವದ ಅಂಗವಾಗಿ ಪ್ರಸ್ತುತ ರೀಡರ್ಸ್ ಫೋರಂ ಈಸ್ಟರ್ನ್ ಪ್ರೊವಿನ್ಸ್ ಸೌದಿ ಅರೇಬಿಯ ಸಮಿತಿಯ ವತಿಯಿಂದ ದಮಾಮ್ ನ ಹೋಟೆಲ್ ಪ್ಯಾರಗನ್ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ ''ಪ್ರಸ್ತುತ ಓದುಗರ ಸಂಜೆ'' ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು.

ಡಾ. ಮುರಳೀಧರ್ ಹಾಗೂ ಡಾ.ಗೀತಾ ಅವರ ಪುತ್ರಿ ಪುಟಾಣಿ ಪ್ರತಿಭೆ ಕುಮಾರಿ ಗ್ರೀಷ್ಮಾ ತನ್ನ ಸುಶ್ರಾವ್ಯ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

''ಮಾಧ್ಯಮ ಮತ್ತು ಪ್ರಜಾಪ್ರಭುತ್ವ'' ವಿಷಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸ್ತುತ ಪಾಕ್ಷಿಕ ಸಂಪಾದಕ ಮಂಡಳಿಯ ಸದಸ್ಯ ಅಬ್ದುಲ್ ರಝಾಕ್ ಕೆಮ್ಮಾರ ಅವರು ಮಾತನಾಡಿ, ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾಗಿದ್ದ ಮಾಧ್ಯಮಗಳು ಕಾರ್ಪೊರೇಟ್ ಕಂಪೆನಿಗಳ, ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಮಾಧ್ಯಮವು ಇತರ ಕ್ಷೇತ್ರಗಳಂತೆ ಒಂದು ಲಾಭಾಧಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ಈ ನಡುವೆ ಹೋರಾಟ ಮನೋಸ್ಥಿತಿಯ ಜನರು ನ್ಯಾಯದ ಪರ ದನಿಯೆತ್ತಲು ಸ್ಥಳೀಯವಾಗಿ ಪತ್ರಿಕೆಯನ್ನು ನಡೆಸುತ್ತಿರುವುದನ್ನು  ಕಾಣಬಹುದು. ಅವುಗಳ ಪೈಕಿ ಪ್ರಸ್ತುತ ಪಾಕ್ಷಿಕ ಕೂಡ ಒಂದು ಎಂದರು.

ಇನ್ನೋರ್ವ ಅತಿಥಿ ಮಾಸ ಅಸೋಸಿಯೇಶನ್ ಅಧ್ಯಕ್ಷ ನರೇಂದ್ರ ಶೆಟ್ಟಿ ಅವರು ಪತ್ರಿಕೆ ಹಾಗೂ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪ್ರಸ್ತುತ ಪಾಕ್ಷಿಕ ನಿಕಟಪೂರ್ವ ಸಂಪಾದಕ ಮುಹಮ್ಮದ್ ಶಬೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರಸ್ತುತ ರೀಡರ್ಸ್ ಫೋರಂ ಅಧ್ಯಕ್ಷ ಫಯಾಝ್ ಎನ್. ಅವರು ಮುಖ್ಯ ವಿಷಯ ಮಂಡಿಸಿದರು.

ಈ ಸಂದರ್ಭದಲ್ಲಿ  ''ಪ್ರಸ್ತುತ ವರ್ಷದ ವ್ಯಕ್ತಿ-2015''ಯಾಗಿ ಆಯ್ಕೆಯಾದ ಸಾಮಾಜಿಕ ಕಾರ್ಯಕರ್ತ ನೌಶಾದ್ ಕಾಟಿಪಳ್ಳ ಅವರನ್ನು ಅಬ್ದುಲ್ ರಝಾಕ್ ಕೆಮ್ಮಾರ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

''ಪ್ರಸ್ತುತ ಕ್ಯಾಲೆಂಡರ್ - 2016'' ನ್ನು ಇಂಡಿಯಾ ಫ್ರಟರ್ನಿಟಿ ಫೋರಂ, ಈಸ್ಟರ್ನ್ ಪ್ರೊವಿನ್ಸ್- ಕರ್ನಾಟಕ ಅಧ್ಯಕ್ಷ ಇಮ್ತಿಯಾಝ್ ಅವರು ಬಿಡುಗಡೆಗೊಳಿಸಿದರು.  ಕಾರ್ಯಕ್ರಮವನ್ನು ಅಶ್ರಫ್ ಕುಕ್ಕಾಜೆ ನಿರೂಪಿಸಿದರು.

ಮುಸ್ಸಂಜೆಯ ವೇಳೆ ನಡೆದ ಪ್ರಸ್ತುತ ಕಾವ್ಯ ಲಹರಿ ಕವಿಗೋಷ್ಠಿಯು ಸಭಿಕರನ್ನು ರಂಜಿಸಿತು. ಹಿರಿಯ ಜನಪ್ರಿಯ ಕವಿ ಜಲೀಲ್ ಮುಕ್ರಿ ಅವರು ಕವಿಗೋಷ್ಠಿಯನ್ನು ನಡೆಸಿಕೊಟ್ಟರು. ಇತರ ಕವಿಗಳಾದ ಅಬ್ದುಲ್ ಖಾದರ್ ಮರವೂರು, ಉದಯೋನ್ಮುಖ ಕವಿ ಅನ್ವರ್ ಮಠ, ಅಬ್ದುಲ್ ರಝಾಕ್ ಕೆಮ್ಮಾರ, ಎ. ಎಂ. ಆರೀಫ್ ಜೋಕಟ್ಟೆ, ಫಯಾಝ್ ಎನ್. ತಮ್ಮ ಕವನಗಳ ಮೂಲಕ ಸಭಾಂಗಣದಲ್ಲಿ ಕಾವ್ಯ ಲಹರಿಯನ್ನು ಹರಿಸಿದರು. ಭಾಗವಹಿಸಿದ ಎಲ್ಲ ಕವಿಗಳಿಗೆ  ಪ್ರಸ್ತುತ ರೀಡರ್ಸ್ ಫೋರಂ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

''ಪ್ರಸ್ತುತ ಓದುಗರ ಸಂಜೆ'' ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಕಿರ್ ಅಕ್ಕರಂಗಡಿ ಹಾಗೂ ಕವನ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಿಝಾಮುದ್ದೀನ್ ತಬೂಕು ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅನಿವಾಸಿ ಭಾರತೀಯ ಪ್ರತಿಭೆಗಳಿಗೆ ಏರ್ಪಡಿಸಲಾಗಿದ್ದ ಬಹುಭಾಷಾ ಹಾಡು ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಿಸಾರ್ ಜುಬೈಲ್ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಅಬ್ದುಲ್ ಖಾದರ್ ಅವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ನಿರೂಪಕರಾಗಿ ಅಝರುದ್ದೀನ್ ತೋಡಾರ್, ಅಶ್ರಫ್ ಕುಕ್ಕಾಜೆ ಕಾರ್ಯನಿರ್ವಹಿಸಿದರು. ಇರ್ಶಾದ್ ಮಂಗಳೂರು ಧನ್ಯವಾದ ಸಲ್ಲಿಸಿದರು.

Writer - ಆರೀಫ್ ಜೋಕಟ್ಟೆ

contributor

Editor - ಆರೀಫ್ ಜೋಕಟ್ಟೆ

contributor

Similar News