ಯುಎಇ ನಿವಾಸಿಗಳಿಗೆ ಹೊಸ ವರ್ಷದ ಕೊಡುಗೆ

Update: 2016-01-08 14:19 GMT

ಮೂರು ಎಮಿರೇಟ್‌ಗಳ 7 ಪ್ರಮುಖ ರಸ್ತೆಗಳ ನವೀಕರಣ

ದುಬೈ: ಯುಎಇನ ಲೋಕೋಪ ಯೋಗಿ ಸಚಿವಾಲಯವು ಶಾರ್ಜಾ, ರಾಸ್ ಅಲ್ ಖೈಮಾ (ಆರ್‌ಎಕೆ) ಹಾಗೂ ಫುಜೈರಾಗಳಲ್ಲಿನ ಏಳು ಪ್ರಮುಖ ರಸ್ತೆಗಳನ್ನು ನವೀಕರಿಸಲು ಸುಮಾರು 780 ದಶಲಕ್ಷ ದಿರ್ಹಂಗೂ ಅಧಿಕ ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆಯೆಂದು ಲೋಕೋಪಯೋಗಿ ಸಚಿವ ಡಾ. ಅಬ್ದುಲ್ಲಾ ಬೆಲ್‌ಹೈಫ್ ಅಲ್ ನುವೈಮಿ ತಿಳಿಸಿದ್ದಾರೆ.

ಈ ಏಳು ರಸ್ತೆಗಳು ಯುಎಇನ ಎಲ್ಲಾ ಬಂದರುಗಳೊಂದಿಗೆ ಪರಸ್ಪರ ಸಂಪರ್ಕವನ್ನು ಕಲ್ಪಿಸಲಿದೆ ಹಾಗೂ ಅಂತರ್‌ನಗರ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲಿದೆಯೆಂದು ಅವರು ಹೇಳಿದ್ದಾರೆ.

ಪ್ರಸ್ತಾಪಿತ ಯೋಜನೆಯಡಿ ಮೊದಲ ಹಂತದಲ್ಲಿ ಶಾರ್ಜಾ-ಧಾಯಿಡ್ ರಸ್ತೆ, ರಾಸ್ ಅಲ್ ಖೈಮಾದಲ್ಲಿ 14 ಕಿ.ಮೀ. ವಿಸ್ತೀರ್ಣದ ಇತ್ತಿಹಾದ್ ರಸ್ತೆ, ಅಲ್ ತ್ವಾಯಿನ್‌ನಿಂದ ಆರ್‌ಎಕೆ ರಿಂಗ್ ರಸ್ತೆಯವರೆಗಿನ ಎಮಿರೇಟ್ಸ್ ರಸ್ತೆ, ಕಲ್ಬಾ ರಿಂಗ್ ರಸ್ತೆ ಹಾಗೂ ಅಲ್ ಹೈಲ್ ಪ್ರದೇಶದ ರಸ್ತೆಗಳನ್ನು ನವೀಕರಿಸಲಾಗುವುದು.

 ಎರಡನೆ ಹಂತದಲ್ಲಿ ಶಾಮ್-ದಾರಾ ಗಡಿರಸ್ತೆ, ಪಶ್ಚಿಮ ಖೋರ್ ಫಕ್ಕಾನ್ ರಿಂಗ್ ರಸ್ತೆ (ಇ 199)ಯನ್ನು ಸೇರ್ಪಡೆಗೊಳಿಸಲಾಗಿದೆ. ತ್ವಾಯಿನ್ ರೌಂಡ್‌ಎಬೌಟ್-ಎಮಿರೇಟ್ಸ್ ರಸ್ತೆ ಹಾಗೂ ಇತ್ತಿಹಾದ್ ರಸ್ತೆಗಳನ್ನು ಮೂರನೆ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.ದೇಶದ ಸುಸ್ಥಿರ ಅಭಿವೃದ್ಧಿಗೆ ಹೆದ್ದಾರಿಗಳು ಜೀವನಾಡಿಯಾಗಿದ್ದು, ದೇಶದ ಆರ್ಥಿಕ ಉನ್ನತಿ ಹಾಗೂ ಸಾಮಾಜಿಕ ಪ್ರಗತಿಗೆ ಅವು ಉತ್ತೇಜನ ನೀಡಲಿವೆಯೆಂದವರು ಹೇಳುತ್ತಾರೆ.

  ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್, ಯುಎಇ ಉಪಾಧ್ಯಕ್ಷ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರ ನಿರ್ದೇಶನದ ಪ್ರಕಾರ, ಲೋಕೋಪಯೋಗಿ ಸಚಿವಾಲಯವು ದೇಶದ ಎಲ್ಲಾ ರಸ್ತೆಗಳನ್ನು ಪರಸ್ಪರ ಸಂಪರ್ಕಿಸುವ ಯೋಜನೆಯನ್ನು ಹಮ್ಮಿಕೊಂಡಿದೆಯೆಂದು ನುವೈಮಿ ತಿಳಿಸಿದ್ದಾರೆ.

  ‘‘ಯುಎಇನಲ್ಲಿ ವಾಸಿಸುವ ಎಲ್ಲಾ ಪ್ರಜೆಗಳಿಗೆ ಹಾಗೂ ನಿವಾಸಿಗಳಿಗೆ ಉತ್ಕೃಷ್ಟವಾದ ಜೀವನಮಟ್ಟವನ್ನು ಒದಗಿಸುವುದು ಹಾಗೂ ಯುಎಇನ ಎಲ್ಲಾ ನಗರಗಳನ್ನು, ಪ್ರಾಂತಗಳನ್ನು ಮತ್ತು ಪಟ್ಟಣಗಳನ್ನು ಉನ್ನತ ಗುಣಮಟ್ಟದ ರಸ್ತೆಗಳ ಮೂಲಕ ಸಂಪರ್ಕಿಸುವುದು ಹಾಗೂ ರಸ್ತೆಗಳ ಜಾಲವನ್ನು ರೂಪಿಸುವುದೇ ಈ ಯೋಜನೆಯ ಉದ್ದೇಶವಾಗಿದೆಯೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News