ಓಮನ್ ಮಾಬೆಲಾ ‘ಇಂಡಿಯನ್ ಪ್ರವಾಸಿ ಫೋರಂ’ ರಕ್ತದಾನ ಶಿಬಿರ

Update: 2016-01-09 10:51 GMT

    ಮಸ್ಕತ್: ಓಮನ್‌ನ ಮಾಬೆಲಾದ ‘ಇಂಡಿಯನ್ ಪ್ರವಾಸಿ ಫೋರಂ’ ಸಂಘವು ಸುಲ್ತಾನೇಟ್ ಆಫ್ ಓಮನ್‌ನ ಆರೋಗ್ಯ ಸಚಿವಾಲಯ ಹಾಗೂ ಮಾಡರ್ನ್ ಅಲ್ ಸಲಾಮಾ ಪಾಲಿಕ್ಲಿನಿಕ್ ಆಸ್ಪತ್ರೆಯ ಸಹಕಾರದೊಂದಿಗೆ ‘ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ’ವನ್ನು ಜನವರಿ 1ರಂದು ಮಾಬೆಲಾ ಕೈಗಾರಿಕಾ ಪ್ರದೇಶದಲ್ಲಿರುವ ಧಿಯಾ ಅಲ್ ಮುಸ್ತಾಕ್‌ಬಿಲ್ ಖಾಸಗಿ ಶಾಲೆಯ ಆವರಣದಲ್ಲಿ ಏರ್ಪಡಿಸಿತ್ತು.

    ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ಇಂಡಿಯನ್ ಪ್ರವಾಸಿ ಫೋರಂನ ಉತ್ತರ ಭಾರತ ವಲಯದ ಅಧ್ಯಕ್ಷ ಮಕ್ಸೂದ್ ಶೇಖ್ ಮಾತನಾಡಿ, ರಕ್ತದಾನ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ಓಮನ್ ವೈದ್ಯರು, ರಕ್ತದ ಲಭ್ಯತೆಯ ಪ್ರಮಾಣವನ್ನು ಹೆಚ್ಚಿಸಲು ಜನತೆ ರಕ್ತದಾನಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದ ಸಂದರ್ಭದಲ್ಲೇ ಈ ಶಿಬಿರ ನಡೆದಿರುವುದು ಸಕಾಲಿಕವಾಗಿದೆಯೆಂದು ಪ್ರಶಂಸಿಸಿದರು. ಓಮನ್‌ನ ಇಂಡಿಯನ್ ಪ್ರವಾಸಿ ಫಾರಂ ಹಮ್ಮಿಕೊಂಡಿರುವ ಇತರ ಸಮಾಜಸೇವಾ ಚಟುವಟಿಕೆಗಳನ್ನೂ ಅವರು ಶ್ಲಾಘಿಸಿದರು.

ಇನ್ನೋರ್ವ ಮುಖ್ಯ ಅತಿಥಿ, ಮಾಡರ್ನ್ ಅಲ್ ಸಾಮ್ನಾ ಪಾಲಿಕ್ಲಿನಿಕ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುಹಮ್ಮದ್ ಮುಸ್ತಫಾ ಅವರು ಸಭಿಕರಿಗೆ ಆರೋಗ್ಯ ಸಲಹೆಗಳನ್ನು ಹಾಗೂ ರಕ್ತದಾನದ ಪ್ರಯೋಜನಗಳನ್ನು ವಿವರಿಸಿದರು. ಕೇವಲ 400 ಮಿ.ಲೀ. ರಕ್ತವನ್ನು ದಾನ ಮಾಡುವುದರಿಂದ ಮೂರು ಜನರ ಜೀವವನ್ನು ಉಳಿಸಲು ಸಾಧ್ಯವಿದೆಯೆಂದು ಅವರು ಹೇಳಿದರು.

      

 ಓಮನ್‌ನ ಇಂಡಿಯನ್ ಪ್ರವಾಸಿ ಫಾರಂ, ಕರ್ನಾಟಕ ಚಾಪ್ಟರ್‌ನ ಅಧ್ಯಕ್ಷ ಯೂಸುಫ್ ಹೈದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಡರ್ನ್ ಅಲ್ ಸಲಾಮ ಪಾಲಿಕ್ಲಿನಿಕ್‌ನ ಆಡಳಿತ ನಿರ್ದೇಶಕ ಅಬೂಬಕರ್ ಸಿದ್ದೀಕಿ, ಝಿಯಾವುಲ್ ಮುಷ್ತಾಕ್ ಬೀಲ್ ಪ್ರೈವೇಟ್ ಸ್ಕೂಲ್‌ನ ಪ್ರಾಂಶುಪಾಲೆ ಇಬ್ತಿಝಾಮ್ ಮುಹಮ್ಮದ್, ಇಂಡಿಯನ್ ಪ್ರವಾಸಿ ಫಾರಂನ ಬರ್ಕ್ ಪ್ರದೇಶದ ಅಧ್ಯಕ್ಷ ಅಬ್ಬಾಸ್ ಗುರುಪುರ ಉಪಸ್ಥಿತರಿದ್ದರು. ಇಂಡಿಯನ್ ಪ್ರವಾಸಿ ಫಾರಂನ ಬರ್ಕಾ ಪ್ರದೇಶದ ಅಧ್ಯಕ್ಷ ಇರ್ಫಾನ್ ಉಜಿರೆ ಮೊದಲಿಗರಾಗಿ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 56ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣೆಯ ಪ್ರಯೋಜನವನ್ನು 300 ಮಂದಿ ಪಡೆದರು.

ಅಬ್ದುಲ್ ರಶೀದ್ ಬೆಳ್ತಂಗಡಿ ಸ್ವಾಗತಿಸಿದರು ಹಾಗೂ ಝಕಾರಿಯಾ ಬಪ್ಪಳಿಗೆ ಧನ್ಯವಾದ ಅರ್ಪಿಸಿದರು. ಅಬ್ದುಲ್ ಹಕೀಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News