×
Ad

ದುಬೈಯಲ್ಲಿ ಕಳರಿಪಯಟ್ಟ್

Update: 2016-01-09 16:45 IST

ಗ್ಲೋಬಲ್ ವಿಲೇಜ್‌ನಲ್ಲಿ ತೆರೆದಿದೆ

ಕೇರಳದ ಪ್ರಾಚೀನ ಸಮರ ಕಲೆಯ ತರಬೇತಿ ಕೇಂದ್ರ

ದುಬೈ: ಕಳರಿಪಯಟ್ಟು ಕೇರಳದ ಪ್ರಾಚೀನ ಸಮರಕಲೆ. ಖಡ್ಗ, ಸರಳು ಹಾಗೂ ತಲವಾರುಗಳಿಂದ ಕಾದಾಡುವ ಈ ಕದನಶೈಲಿ ಈಗ ಜಗತ್ತಿನೆಲ್ಲೆಡೆ ಜನಪ್ರಿಯವಾಗುತ್ತಿದೆ. ಇದೀಗ ದುಬೈನಲ್ಲಿಯೂ ಕೇರಳದ ಈ ಸಾಂಪ್ರದಾಯಿಕ ಸಮರ ಕಲೆಯ ತರಬೇತಿ ಕೇಂದ್ರವೊಂದು ಆರಂಭಗೊಂಡಿದೆ.

                                                                                                                              ಸುಮಾರು 70 ವರ್ಷಗಳಿಂದ ಕಳರಿಪಯಟ್ಟು, ಖಡ್ಗ ಯುದ್ಧ ಹಾಗೂ ಸಾಹಸಕಲೆಗಳಲ್ಲಿ ತರಬೇತಿ ನೀಡುತ್ತಿರು ಕೇರಳದ ನಾಡಕ್ಕಾವುನ ಸಿವಿಎನ್ ಕಳರಿಯು, ಈಗ ದುಬೈನಲ್ಲಿ ತರಬೇತಿ ಹಾಗೂ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಯುಎಇನಲ್ಲಿ ತನ್ನ ಪಾದಾರ್ಪಣೆಯ ಅಂಗವಾಗಿ ಕೇಂದ್ರವು ದುಬೈನ 'ಗ್ಲೋಬಲ್ ವಿಲೇಜ್'ನಲ್ಲಿ ಕಳರಿಪಯಟ್ಟು ಹಾಗೂ ಗಾಯಗಳಿಗೆ ಚಿಕಿತ್ಸೆ ನೀಡುವ ಪದ್ಧತಿಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಿದೆ. ಸಿವಿಎನ್ ಕಳರಿಯ ನುರಿತ ಪಟುಗಳು ಜನವರಿ 14ರಿಂದ ಗ್ಲೋಬಲ್ ವಿಲೇಜ್‌ನ ಮುಖ್ಯ ರಂಗಮಂಟಪದಲ್ಲಿ ಪ್ರದರ್ಶನ ನೀಡಲಿದ್ದಾರೆ.

  ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಕಳರಿಗೆ ಸಂಬಂಧಿಸಿದ ಇತರ ಚಿಕಿತ್ಸೆಗಳ ಜೊತೆಗೆ ಆಯುರ್ವೇದಿಕ್ ಶೈಲಿಯ 'ಕಳರಿ ಮಸಾಜ್' ಕೂಡಾ ಆರಂಭಿಸಲಾಗುವು ದೆಂದು ಕುಮಾರ್ ಹೇಳುತ್ತಾರೆ. ''ಕಳರಿಪಯಟ್ಟುವಿನಲ್ಲಿ ತರಬೇತಿ ಪಡೆಯುವಾಗ ವಿದ್ಯಾರ್ಥಿಗಳಿಗೆ ಪೆಟ್ಟಾಗುತ್ತದೆ.ಇಂತಹ ಸಂದರ್ಭದಲ್ಲಿ ಕಳರಿ(ಗರಡಿ)ಯಲ್ಲಿಯೇ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಬಿದ್ದು ಪೆಟ್ಟಾಗುವುದು, ಸ್ನಾಯುಗಳ ಸ್ಥಾನಪಲ್ಲಟ, ಮೂಳೆ ಮುರಿತದಂತಹ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಳರಿಪಯಟ್ಟುವಿನಲ್ಲಿ ನಾವಿನ್ನೂ ತಿಳಿದುಕೊಳ್ಳಬೇಕಿರುವ ವಿಷಯಗಳು ಬಹಳಷ್ಟಿವೆ''ಎಂದವರು ಹೇಳುತ್ತಾರೆ. ಅರ್ಥರೈಟಿಸ್, ಬೆನ್ನುಮೂಳೆ ಮುರಿತ, ಕ್ರೀಡಾ ಗಾಯಗಳು, ಮೂಳೆ ಮುರಿತ, ರ್ಯುಮಾಟಿಸಂನಂತಹ ಮೂಳೆ, ನರ ಹಾಗೂ ಸ್ನಾಯುವಿಗೆ ಸಂಬಂಧಿಸಿದ ಕಾಯಿಲೆಗಳಿಗೂ ಸಿವಿಎನ್ ಕಳರಿಯು, ದುಬೈನ ಇಂಡಿಯನ್ ಪೆವಿಲಿಯನ್‌ನಲ್ಲಿ ವಿಶೇಷ ಕಳರಿ ಮಸಾಜ್ ಚಿಕಿತ್ಸೆಯನ್ನು ನೀಡಲಿದೆ. ಬೆನ್ನು ನೋವಿನ ಉಪಶಮನಕ್ಕಾಗಿ, ವಿಶೇಷ 'ಮರ್ಮ ಚಿಕಿತ್ಸೆ'ಯನ್ನು ಕೂಡಾ ಇಲ್ಲಿ ನೀಡಲಾಗುತ್ತದೆ. ದೇಹದಲ್ಲಿ 107 ಮರ್ಮಸ್ಥಳಗಳಿದ್ದು, ಅವುಗಳಲ್ಲಿ 64 ಮರ್ಮಸ್ಥಳಗಳಿಗೆ ಪೆಟ್ಟಾದಲ್ಲಿ ಜೀವಕ್ಕೆ ಅಪಾಯವಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಆಯುರ್ವೇದ ಶಾಸ್ತ್ರದ ಪ್ರಕಾರ ಗಾಯಗಳಿಗೆ ಚಿಕಿತ್ಸೆಯನ್ನು ನೀಡುವಲ್ಲಿ ಕಳರಿಯ ಗುರುಗಳು ಪರಿಣಿತರು ಎಂದು ಗೋಪಕುಮಾರ್ ಹೇಳುತ್ತಾರೆ.

 ಗ್ಲೋಬಲ್ ವಿಲೇಜ್‌ನಲ್ಲಿ ಜನವರಿ 14ರಂದು ಏಳು ಮಂದಿ ಕಳರಿಪಯಟ್ಟು ಪಟುಗಳು ಅರ್ಧತಾಸುಗಳ ಪ್ರದರ್ಶನವನ್ನು ನೀಡಲಿದ್ದಾರೆ. ಇತರ ಅಂತಾರಾಷ್ಟ್ರೀಯ ಸ್ಥಳಗಳಲ್ಲಿಯೂ ಕಳರಿಪಯಟ್ಟನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದೆಯೆಂದವರು ತಿಳಿಸಿದ್ದಾರೆ.

  1945ರಲ್ಲಿ ಕೇರಳದ ಕಲ್ಲಿಕೋಟೆಯ ನಾಡಕ್ಕಾವುನಲ್ಲಿ ಕುಮ್ಮಾನ್ ನಾರಾಯಣನ್ ಅವರು ಕಳರಿಪಯಟ್ಟು ತರಗತಿಯನ್ನು ಆರಂಭಿಸಿದರು. ಅವರ ಪುತ್ರರಾದ ಗೋಪಕುಮಾರ್, ಅನಿಲ್ ಕುಮಾರ್ ಹಾಗೂ ಸುನೀಲ್ ಕುಮಾರ್ ಅವರು ಕುಮಾರ್ ನಾರಾಯಣನ್ ಅವರ ಪುತ್ರರು. ಕುಮಾರ್ ನಾರಾಯಣನ್ ನಾಡಕ್ಕಾವು ಜೊತೆ ಕಣ್ಣೂರಿನಲ್ಲೂ ಅವರು ಕಳರಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದರು. 1945ರಲ್ಲಿ ನಾಡಕ್ಕಾವು ಕಳರಿ ಪ್ರಾರಂಭಗೊಂಡಾಗ ಸ್ಥಳೀಯರ ಜೊತೆಗೆ ಕೆಲವು ವಿದೇಶಿ ವಿದ್ಯಾರ್ಥಿಗಳೂ ಇದ್ದರು. ಆಗ ಸಾಮಾನ್ಯ ಖಡ್ಗಗಳನ್ನೇ ತರಬೇತಿಗೆ ಬಳಸಿಕೊಳ್ಳಲಾಗುತ್ತ್ತ್ತಿತ್ತು. ಕಳರಿಪಯಟ್ಟು ಆತ್ಮರಕ್ಷಣೆಗೆ ಹಾಗೂ ಸಂಯಮಕ್ಕೆ ಅತ್ಯುತ್ತಮವಾದ ವಿಧಾನವಾಗಿದೆ. ಬಂದೂಕುಗಳು ಹಾಗೂ ಕ್ಷಿಪಣಿಗಳ ಆಗಮನಕ್ಕೆ ಮುನ್ನ ಸೈನಿಕರೆಲ್ಲರೂ ಖಡ್ಗಗಳಿಂದಲೇ ಕಾದಾಡುತ್ತಿದ್ದರು. ಸ್ಥಳೀಯ ರಾಜರುಗಳ ಸೈನಿಕರು ಸಮರಕಲೆಯಲ್ಲಿ ತರಬೇತಿ ಪಡೆಯಬಹುದೆಂಬ ಭೀತಿಯಿಂದ ಬ್ರಿಟಿಷರು ಕಳರಿಪಯಟ್ಟನ್ನು ನಿಷೇಧಿಸಿದ್ದರು. ಇದೀಗ ಆಸ್ಟ್ರೇಲಿಯಾ, ಯುರೋಪ್, ಜಪಾನ್ ಮತ್ತಿತರ ದೇಶಗಳಲ್ಲಿಯೂ ತರಬೇತಿ ಶಾಖೆಗಳನ್ನು ಹೊಂದಿದ್ದೇವೆಂದು ಗೋಪಕುಮಾರ್ ಹೇಳುತ್ತಾರೆ.

ಸಿವಿಎನ್ ಕಳರಿಗೆ ಬಾಲಿವುಡ್ ನಂಟು

ಸಿವಿಎನ್ ಕಳರಿಯಲ್ಲಿ ರಣವೀರ್‌ಸಿಂಗ್, ದೀಪಿಕಾಪಡುಕೋಣೆ ಸೇರಿದಂತೆ ಹಲವಾರು ಬಾಲಿವುಡ್ ಕಲಾವಿದರು ತರಬೇತಿ ಪಡೆದಿದ್ದಾರೆ. ಇತ್ತೀಚಿನ ಸೂಪರ್ ಹಿಟ್ ಬಾಲಿವುಡ್ ಚಿತ್ರ ‘ಬಾಜಿರಾವ್ ಮಸ್ತಾನಿ’ ಚಿತ್ರದ ಯಶಸ್ಸಿಗೆ ಈ ತಾರಾಜೋಡಿಯ ಅದ್ಭುತ ನಿರ್ವಹಣೆಗೆ , ಸಿವಿಎನ್ ಕಳರಿಯಲ್ಲಿ ಅವರು ಪಡೆದಿರುವ ತರಬೇತಿ ಕೂಡಾ ಭಾಗಶಃ ಕಾರಣವೆನ್ನಲಾಗುತ್ತಿದೆ.

‘‘ಆಯುರ್ವೇದದಂತೆ ಕಳರಿಪಯಟ್ಟು ಕೂಡಾ ಜಗತ್ತಿ ನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಬಾಜಿರಾವ್ ಮಸ್ತಾನಿಯನ್ನು ವೀಕ್ಷಿಸಿದವರಿಗೆ ಕಳರಿಪಯಟ್ಟುವಿನ ಮಹತ್ವ ತಿಳಿಯುತ್ತದೆ. ಚಿತ್ರದಲ್ಲಿ ಮರಾಠ ದೊರೆ ಬಾಜಿರಾವ್‌ನ ಪಾತ್ರದಲ್ಲಿ ನಟಿಸಿರುವ ರಣವೀರ್‌ಸಿಂಗ್ ಹಾಗೂ ಯುವರಾಣಿ ಮಸ್ತಾನಿಯಾಗಿ ಅಭಿನಯಿಸಿರು ದೀಪಿಕಾ ಪಡುಕೋಣೆ, ಸಿವಿಎನ್ ಕಳರಿಯ ಟ್ರೈನರ್‌ಗಳಿಂದ ತರಬೇತಿ ಪಡೆದಿದ್ದಾರೆ. ಜಾಕಿ ಚಾನ್, ಮಮ್ಮುಟ್ಟಿ, ಮೋಹನ್‌ಲಾಲ್, ಅಭಿಷೇಕ್ ಬಚ್ಚನ್ ಸೇರಿದಂತೆ ಇತರ ಹಲವು ತಾರೆಯರಿಗೆ, ನಾವು ವಿವಿಧ ಚಿತ್ರಗಳಿಗಾಗಿ ತರಬೇತಿ ನೀಡಿದ್ದೇವೆ’’ ಎಂದು ಸಿವಿಎನ್ ಕಳರಿಯ ನಿರ್ದೇಶಕ ಗೋಪಕುಮಾರ್ ಹೇಳುತ್ತಾರೆ. ಸಿವಿಎನ್ ಕಳರಿಯು ದುಬೈನ ಗ್ಲೋಬಲ್ ವಿಲೇಜ್‌ನಲ್ಲಿರುವ ಭಾರತೀಯ ಪೆವಿಲಿಯನ್‌ನಲ್ಲಿ ಸಕ್ರಿಯವಾಗಿದೆಯೆಂದು ಅವರು ತಿಳಿಸುತ್ತಾರೆ.

 ‘‘ಪಳಸಿರಾಜಾ, ತಚ್ಚೋಳಿ ವರ್ಗೀಸ್ ಚೆಗವಾರು, ಒರು ವಡಕ್ಕನ್ ವೀರ ಗಥಾ, ಉರುಮಿ, ಗುರುವಿನಂತಹ ಐತಿಹಾಸಿಕ ಹಿನ್ನೆಲೆಯ ಮಲಯಾಳಂ ಚಿತ್ರಗಳಿಗಾಗಿ ನಾವು ತಾರೆಯರಿಗೆ ತರಬೇತಿ ನೀಡಿದ್ದೇವೆ. ‘ದಿಲ್‌ಸೆ’ ಹಾಗೂ ‘ಅಶೋಕಾ’ ಚಿತ್ರಗಳ ಫೈಟಿಂಗ್ ದೃಶ್ಯಗಳಿಗಾಗಿ ನಾವು ಶಾರುಕ್ ಖಾನ್‌ಗೆ ತರಬೇತಿ ನೀಡಿದ್ದೇವೆ. ಅವರು ಮುಂಬೈಯಲ್ಲಿ ತರಬೇತಿ ನೀಡಿದ್ದೇವೆ. ‘ಲಹೂ ಕೆ ದೊ ರಂಗ್’ ಚಿತ್ರದಲ್ಲಿ ಅಕ್ಷಯ್‌ಕುಮಾರ್‌ಗೆ ಹಾಗೂ ಕನ್ನಡ ಚಿತ್ರಗಳಾದ ‘ಶಕುನಿ’ ಹಾಗೂ ಏಕಾಂಗಿಗಾಗಿ ರವಿಚಂದ್ರನ್‌ಗೆ ಕಳರಿಯಲ್ಲಿ ತರಬೇತಿ ನೀಡಿದ್ದೇವೆ ಎಂದವರು ಹೇಳುತ್ತಾರೆ.

   ಬಾಜಿರಾವ್ ಮಸ್ತಾನಿಗಾಗಿ ರಣವೀರ್‌ಸಿಂಗ್ ಹಾಗೂ ದೀಪಿಕಾ ಪಡುಕೋಣೆಗೆ ಕಳರಿಪಯಟ್ಟುವಿನಲ್ಲಿ ತರಬೇತಿ ನೀಡುವಂತೆ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ನಮ್ಮನ್ನು ಆಹ್ವಾನಿಸಿದ್ದರು. ಮುಂಬೈಯಲ್ಲಿ ಅವರಿಗೆ ಕಳರಿ ತರಬೇತಿಯನ್ನು ನೀಡಲಾಗಿತ್ತು. ವಿವಿಧ ಆ್ಯಕ್ಷನ್ ದೃಶ್ಯಗಳನ್ನು ನಾವೇ ಸಂಯೋಜಿಸಿದ್ದೆವು. ಯುದ್ಧ ಹಾಗೂ ಫೈಟಿಂಗ್ ಒಳಗೊಂಡ ಹಲವಾರು ಸನ್ನಿವೇಶದ ಚಿತ್ರೀಕರಣದ ವೇಳೆ ನಮ್ಮ ತಂಡದ ಉಪಸ್ಥಿತಿಯಿತ್ತು’’ ಎಂದು ಗೋಪಕುಮಾರ್ ಹೇಳುತ್ತಾರೆ. ಕುಮಾರ್ ಅವರು ಸಹೋದರರಾದ ಸುನೀಲ್ ಕುಮಾರ್ ಹಾಗೂ ಅನಿಲ್‌ಕುಮಾರ್ ಜೊತೆಗೂಡಿ ಕಳರಿಯನ್ನು ನಡೆಸುತ್ತಿದ್ದಾರೆ.

‘ ದಿ ಮಿಥ್’ ಚಿತ್ರಕ್ಕಾಗಿ ಜಾಕಿ ಜಾನ್‌ಗೆ, ತರಬೇತಿ ನೀಡಲು ಸಿವಿಎನ್ ಕಳರಿ ತಂಡವು ಚೀನಕ್ಕೆ ತೆರಳಿತ್ತು. ‘ಪಳರಿ ರಾಜಾ’ ಚಿತ್ರದಲ್ಲಿ ಮುಮ್ಮುಟ್ಟಿಗೆ ಕಳರಿ ತರಬೇತಿ ನೀಡಿದ್ದೇವೆ. ಇದಕ್ಕೂ ಮುನ್ನ ಅವರಿಗೆ ‘ವಡಕ್ಕನ್ ವೀರಗಾಥಾ’ ಚಿತ್ರಕ್ಕಾಗಿ ತರಬೇತಿಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News