ಬೃಹತ್ ರಸ್ತೆ ಜಾಲ ವಿಸ್ತರಣೆ ಯೋಜನೆಗೆ ಯುಎಇ ಸನ್ನದ್ಧ
16.5 ಕಿ.ಮೀ. ವಿಸ್ತೀರ್ಣದ ಈ ರಸ್ತೆಯ ವಿಸ್ತರಣೆಗೆ ಸುಮಾರು 14.20 ಮಿಲಿಯ ದಿರ್ಹಮ್ ವೆಚ್ಚವಾಗಲಿದೆಯೆಂದು ಅದು ಅಂದಾಜಿಸಿದೆ. ಈ ದ್ವಿಪಥ ರಸ್ತೆಯನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುವುದು ಹಾಗೂ ತ್ರಿಪಥವಾಗಿಯೂ ವಿಸ್ತರಿಸಬಹುದಾಗಿದೆ.
ದುಬೈ: ಉಮ್ಮುಲ್ ಖುವೈನ್‌ನ ಅಲ್ ಅಖ್ರಾನ್ ಪ್ರದೇಶದಿಂದ, ರಾಸ್ ಅಲ್ ಖೈಮಾದ ಟ್ವಾಯಿನ್ ರಸ್ತೆಯವರೆಗಿನ ಎಮಿರೇಟ್ಸ್ ರೋಡನ್ನು ವಿಸ್ತರಿಸುವ ಬೃಹತ್ ಯೋಜನೆಯನ್ನು ಯುಎಇನ ಸಾರ್ವಜನಿಕ ಕಾಮಗಾರಿ ಸಚಿವಾಲಯವು ಘೋಷಿಸಿದೆ. 16.5 ಕಿ.ಮೀ. ವಿಸ್ತೀರ್ಣದ ಈ ರಸ್ತೆಯ ವಿಸ್ತರಣೆಗೆ ಸುಮಾರು 14.20 ಮಿಲಿಯ ದಿರ್ಹಂ ವೆಚ್ಚವಾಗಲಿದೆಯೆಂದು ಅದು ಅಂದಾಜಿಸಿದೆ. ಈ ದ್ವಿಪಥ ರಸ್ತೆಯನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುವುದು ಹಾಗೂ ತ್ರಿಪಥವಾಗಿಯೂ ವಿಸ್ತರಿಸಬಹುದಾಗಿದೆ. ಎರಡು ವರ್ತುಲಗಳನ್ನು, ಮೂರು ಸಣ್ಣ ಮಳೆ ನೀರು ಸೇತುವೆಗಳನ್ನು ಕೂಡಾ ನಿರ್ಮಿಸಲಾಗುವುದೆಂದು ಎಮಿರೇಟ್ಸ್‌ನ ಲೋಕೋಪಯೋಗಿ ಸಚಿವ ಡಾ. ಅಬ್ದುಲ್ಲಾ ಬೆಲ್‌ಹೈಫ್ ಅಲ್ ನುವೈಮಿ ತಿಳಿಸಿದ್ದಾರೆ.
ಮೊದಲ ಹಂತದ ಕಾಮಗಾರಿಯಲ್ಲಿ ಶಾರ್ಜಾದಲ್ಲಿರುವ ತಹಾಲ್ ಗ್ರಾಮವನ್ನು ಸಂಪರ್ಕಿಸಲಾಗುವುದು. ಮೊದಲ ಹಂತದಲ್ಲಿ ಶಾರ್ಜಾ-ದಾಯಿಡ್ ರಸ್ತೆ (ಇ44)ಯಿಂದ ಉತ್ತರಕ್ಕೆ ಹಾಗೂ ಫಲಾಜ್ ಅಲ್ ಮುವಾಲ್ಲಾ ರಸ್ತೆ (ಇ55)ಯಿಂದ ದಕ್ಷಿಣಕ್ಕೆ 5.8 ಕಿ.ಮೀ. ವಿಸ್ತೀರ್ಣದ ಏಕಪಥ ಮುಖ್ಯ ರಸ್ತೆಯನ್ನ್ನು ನಿರ್ಮಿಸಲಾಗುವುದೆಂದು ಅವರು ವಿವರಿಸಿದರು. ಎಮಿರೇಟ್‌ನಾದ್ಯಂತ, ಸುಮಾರು 183 ದಶಲಕ್ಷ ದಿರ್ಹಂ ವೆಚ್ಚದಲ್ಲಿ 5 ಕಿ.ಮೀ. ಉದ್ದ ಹಾಗೂ 7.3 ಮೀಟರ್‌ಅಗಲದ ಹೊಸ ಏಕಪಥ ರಸ್ತೆಗಳನ್ನು ನಿರ್ಮಿಸಲಾಗುವುದೆಂದು ಅವರು ಹೇಳಿದರು.
ಶಾರ್ಜಾದ 5ನೆ ಕೈಗಾರಿಕಾ ಚೌಕವನ್ನು ಕೂಡಾ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಪಂಪಿಂಗ್ ಸ್ಟೇಶನ್ (ಪಿ19ಬಿ) ಹಾಗೂ ಶೇಖ್ ಮುಹಮ್ಮದ್ ಬಿನ್ ಝಾಯೆದ್ ರಸ್ತೆಯಿಂದ ಸಮುದ್ರ ಪ್ರದೇಶಕ್ಕೆ ಮಳೆ ನೀರನ್ನು ಕೊಂಡೊಯ್ಯುವ ಚರಂಡಿಯ ನಿರ್ಮಾಣಗಳನ್ನು ಕೂಡಾ ಈ ಯೋಜನೆಯು ಒಳಗೊಂಡಿದೆ. 183 ದಶಲಕ್ಷ ದಿರ್ಹಂ ವೌಲ್ಯದ ಈ ಯೋಜನೆಯು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳಲಿದೆಯೆಂದು ಅವರು ತಿಳಿಸಿದರು.
ಹೆದ್ದಾರಿ ರಸ್ತೆಗಳ ಕಾಮಗಾರಿ
ಶಾರ್ಜಾ, ರಾಸ್ ಅಲ್ ಖೈಮಾ ಹಾಗೂ ಫುಜಿರಾ ಎಮಿರೇಟ್‌ಗಳಲ್ಲಿ, 780 ದಶಲಕ್ಷ ದಿರ್ಹಂ ವೆಚ್ಚದಲ್ಲಿ ಏಳು ಹೊಸ ಹೆದ್ದಾರಿಗಳನ್ನು ಕೂಡಾ ಲೋಕೋಪಯೋಗಿ ಸಚಿವಾಲಯ ಅಭಿವೃದ್ಧಿ ಪಡಿಸಿದೆಯೆಂದು ಅವರು ತಿಳಿಸಿದರು.
ತನ್ನ ಹೂಡಿಕೆ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ ಇತರ ಆರು ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನೂ ಆರಂಭಿಸಿದೆ. ಕಾಮಗಾರಿಯು ಈ ವರ್ಷದ ತೃತೀಯ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳಲಿದ್ದು, ಆರ್ಥಿಕ ಉನ್ನತಿಗೆ ಉತ್ತೇಜನವನ್ನು ನೀಡಲಿದೆ ಹಾಗೂ ಯುಎಇನಾದ್ಯಂತ ಅಂತರ್‌ನಗರ ಸಾರಿಗೆಯನ್ನು ಸುಲಲಿತಗೊಳಿಸಲಿದೆ.
ಯುಎಕ್ಯೂ ಎಂಟ್ರಾನ್ಸ್ ಇಂಟರ್‌ಸೆಕ್ಷನ್ (ಅಡ್ಡರಸ್ತೆ ಛೇದಕ)ನ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿಯು ಇಲಾಖೆಯು ಕೈಗೊಂಡಿರುವ ಮಹತ್ವದ ಯೋಜನೆಗಳಲ್ಲಿ ಒಂದಾಗಿದ್ದು, ಇದಕ್ಕೆ ಸುಮಾರು 111 ಮಿಲಿಯ ದಿರ್ಹಂ ವೆಚ್ಚ ತಗಲಲಿದೆ ಎಂದರು. ಇತ್ತಿಹಾದ್ ಇಂಟರ್‌ಸೆಕ್ಷನ್ ರಸ್ತೆ (ಇ11) ಹಾಗೂ ಯುಎಕ್ಯೂ-ಫಲಾಜ್ ಅಲ್ ಮುವಾಲ್ಲಾ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗುವುದು.
ಹೊಸ ವಸತಿ ಕಂಪೌಂಡ್‌ಗಳು
ದೇಶಾದ್ಯಂತ 26 ವಸತಿ ಕಂಪೌಂಡ್‌ಗಳು 148 ಮನೆಗಳನ್ನು ಇಲಾಖೆಯು ನಿರ್ಮಿಸಲಿದ್ದು, ವಿನೂತನ ಹಾಗೂ ವಿಶಾಲವಾದ ಮನೆಗಳನ್ನು ಹೊಂದುವ ಸದವಕಾಶ ಎಮಿರೇಟ್ ಪ್ರಜೆಗಳಿಗೆ ದೊರೆತಿದೆಯೆಂದು ಡಾ. ಅಬ್ದುಲ್ಲಾ ಬೆಲ್‌ಹೈಫ್ ಅಲ್ ನುವೈಮಿ ತಿಳಿಸಿದರು. ಈಗಾಗಲೇ 2015ರಲ್ಲಿ ಆರು ವಸತಿ ಬಡಾವಣೆಗಳು ಹಾಗೂ 11 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆಯೆಂದು ಅವರು ತಿಳಿಸಿದರು.