×
Ad

ಸೌದಿ ಅರೇಬಿಯಾ ವಿದ್ಯುತ್, ನೀರು ಶುಲ್ಕ ಏರಿಕೆ ಕಡಿಮೆ ಆದಾಯದವರಿಗೆ ಬಾಧೆಯಿಲ್ಲ

Update: 2016-01-09 17:14 IST

   ರಿಯಾದ್: ವಿದ್ಯುತ್ ಹಾಗೂ ನೀರಿನ ಶುಲ್ಕದಲ್ಲಿ ಏರಿಕೆ ಮಾಡುವ ಕುರಿತಾದ ತಿದ್ದುಪಡಿ ನಿಯಮಗಳ ಜಾರಿಯಿಂದಾಗಿ, ಸೀಮಿತ ಆದಾಯವಿರುವವರು ಬಾಧಿತರಾಗ ಲಾರರೆಂದು ಸೌದಿ ಅರೇಬಿಯದ ಜಲ ಹಾಗೂ ವಿದ್ಯುತ್ ಸಚಿವ ಅಬ್ದುಲ್ಲಾ ಅಲ್ ಹುಸೈನ್ ಸ್ಪಷ್ಟೀಕರಣ ನೀಡಿದ್ದಾರೆ. ನೀರು ಹಾಗೂ ವಿದ್ಯುತ್ ವ್ಯಾಪಕವಾಗಿ ಬಳಸುವ ವರ್ಗಗಳ ಮೇಲೆ ಮಾತ್ರ ನೂತನ ದರ ನಿಯಮಗಳು ಪರಿಣಾಮ ಬೀರಲಿದೆಯೆಂದು, ಸಚಿವರು ಹೇಳಿರುವುದಾಗಿ ಸ್ಥಳೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ತಿದ್ದುಪಡಿ ನಿಯಮಗಳಿಗೆ ಸೌದಿ ಅರೇಬಿಯ ಸಂಪುಟವು ಇತ್ತೀಚೆಗೆ ತನ್ನ ಅನುಮೋದನೆ ನೀಡಿತ್ತು. ‘‘ ಉದಾಹರಣೆಗೆ, ನೂತನ ದರ ನಿಯಮದಿಂದಾಗಿ, ಪ್ರತಿ ದಿನ 250 ಲೀಟರ್ ನೀರಿನ ಬಳಕೆಯಿಂದ, ಪ್ರತಿ ತಿಂಗಳಿಗೆ 92 ಸೌದಿ ರಿಯಾಲ್ ವೆಚ್ಚ ತಗಲಲಿದೆ ಹಾಗೂ ಇಷ್ಟು ಶುಲ್ಕವನ್ನು ವಿಧಿಸುವುದು ಸಕಾರಣವಾಗಿದೆ. ದರ ಪರಿಷ್ಕರಣೆಯಿಂದಾಗಿ ಜನರು ನೀರಿನ ಮಿತಬಳಕೆ ಮಾಡಲು ಆರಂಭಿಸುವರೆಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ’’ ಎಂದು ಅವರು ಹೇಳುತ್ತಾರೆ.

 ನೀರಿನ ಸೋರಿಕೆ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸುವುದನ್ನು ಹಾಗೂ ನೀರನ್ನು ಮಿತವಾಗಿ ಬಳಸುವಂತಹ ಹೊಣೆಗಾರಿಕೆಯನ್ನು ಪೌರರು ಪ್ರದರ್ಶಿಸಬೇಕೆಂದು ಸಚಿವರು ಕರೆ ನೀಡಿದ್ದಾರೆ. ಮುಂದಿನ ತಿಂಗಳು ನೂತನ ದರಯೇರಿಕೆ ಜಾರಿಗೆ ಬರುವ ಮೊದಲು, ನೀರಿನ ಮಿತ ಬಳಕೆಯ ಉಪಕರಣದ ಅಳವಡಿಕೆ ಹಾಗೂ ವಿದ್ಯುತ್ ಉಳಿತಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದರು.

 ‘‘ ಈ ವರ್ಷ ನೀಡಲಾಗಿರುವ ಶೇ.87ರಷ್ಟು ವಿದ್ಯುತ್ ಹಾಗೂ ನೀರಿನ ಬಿಲ್‌ಗಳು ನೂತನ ದರದಿಂದ ಬಾಧಿತವಾಗಲಾರದು. ಶೇ.13ರಷ್ಟು ಬಿಲ್‌ಗಳಿಗೆ ಮಾತ್ರವೇ ದರ ಏರಿಕೆಯ ಅನುಭವವಾಗಲಿದೆ’’ ಎಂದರು. ಶೇ. 52ರಷ್ಟು ಕುಟುಂಬಗಳಿಗೆ ವಿದ್ಯುತ್, ನೀರು ದರಪರಿಷ್ಕರಣೆಯು ಯಾವುದೇ ಪರಿಣಾಮವನ್ನುಂಟು ಮಾಡಲಾರದು. ಶೇ. 52ರಷ್ಟು ಕುಟುಂಬಗಳು, ನೀರಿನ ಬಳಕೆಗಾಗಿ ಪ್ರತಿ ದಿನ 1 ರಿಯಾಲ್ ಅಥವಾ ತಿಂಗಳಿಗೆ 30 ರಿಯಾಲ್‌ಗಿಂತ ಹೆಚ್ಚು ಹಣವನ್ನು ಪಾವತಿಸುವುದಿಲ್ಲವಾದ್ದರಿಂದ, ಕಡಿಮೆ ಹಾಗೂ ಮಧ್ಯಮ ದರ್ಜೆಯ ಆದಾಯವಿರುವ ಕುಟುಂಬಗಳ ಮೇಲೆ ದರ ಏರಿಕೆಯು ಯಾವುದೇ ಪರಿಣಾಮವನ್ನು ಂಟು ಮಾಡಲಾರದು ಎಂದು ಅಬ್ದುಲ್ಲಾ ಅಲ್ ಹುಸೈನ್ ತಿಳಿಸಿದ್ದಾರೆ.

ನೀರು, ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ಶೇ.90ರಷ್ಟು ಕುಟುಂಬಗಳಿಗೆ ತಿಂಗಳಿಗೆ 5 ಸೌದಿ ರಿಯಾಲ್‌ಗಿಂತ ಹೆಚ್ಚುವರಿ ಹೊರೆ ಬೀಳಲಾರದು ಎಂದವರು ಅಭಿಪ್ರಾಯಿಸುತ್ತಾರೆ.. ‘‘ ನೀರಿನ ಖರೀದಿಯಲ್ಲಿ ಸೌದಿ ಅರೇಬಿಯವು ವಿಶ್ವದಲ್ಲೇ ಮೂರನೆ ಸ್ಥಾನದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯವೆಂದು ಅವರು ಹೇಳುತ್ತಾರೆ.

 ‘‘ಮುಸ್ಲಿಮರಾದ ನಾವು ಧರ್ಮವನ್ನು ಅನುಸರಿಸಿ ನಡೆಯುವವರು. ನಮ್ಮ ಪವಿತ್ರ ಕುರ್‌ಆನ್ ಹಾಗೂ ಹದೀಸ್‌ಗಳು, ದುಂದು ವೆಚ್ಚ ಮಾಡಬಾರದೆಂದು ಬೋಧಿಸುತ್ತವೆ. ಹೀಗಿರುವಾಗ, ಆತ ನಮಗೆ ಅನುಗ್ರಹಿಸಿದುದನ್ನು ಯಾಕೆ ನಿಷ್ಪ್ರಯೋಜಕವಾಗಿ ಪೋಲು ಮಾಡಬೇಕು ಎಂದವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News