×
Ad

ತುಂಬೆ ಸಮೂಹ ಸಂಸ್ಥೆಯಿಂದ ಯುಎಇಯಲ್ಲಿ ಬೃಹತ್ ಖಾಸಗಿ ಅಕಾಡಮಿಕ್ ಆಸ್ಪತ್ರೆ ಯೋಜನೆ

Update: 2016-01-23 19:10 IST

ದುಬೈ, ಜ.23: 1998ರಲ್ಲಿ ಸ್ಥಾಪನೆಗೊಂಡು ಯುಎಇಯ ಡಿಐಎಫ್‌ಸಿ ದುಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತುಂಬೆ ಸಮೂಹ ಸಂಸ್ಥೆಯು ಪ್ರದೇಶದಲ್ಲಿ ಅತ್ಯಂತ ದೊಡ್ಡ ಅಕಾಡಮಿಕ್ ಖಾಸಗಿ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಯುಎಇಯಲ್ಲಿ ತನ್ನ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಪ್ರಮುಖ ಅಭಿಯಾನವೊಂದನ್ನು ಕೈಗೊಳ್ಳುವುದಾಗಿ ಪ್ರಕಟಿಸಿದೆ. ಯೋಜನೆಯು 15 ತಿಂಗಳ ದಾಖಲೆ ಕಾಲಾವಧಿಯಲ್ಲಿ ಪೂರ್ಣಗೊಂಡು ಕಾರ್ಯಾಚರಣೆಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

ಮುಂದಿನ ಐದು ವರ್ಷಗಳಲ್ಲಿ ಇನ್ನೂ 15 ಆಸ್ಪತ್ರೆಗಳನ್ನು ಆರಂಭಿಸುವ ತುಂಬೆ ಸಮೂಹದ ಮಹತ್ವದ ಯೋಜನೆಯನ್ನು ಸಮೂಹದ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದಿನ್ ಪ್ರಕಟಿಸಿದರು. ಅಲ್ಲದೆ ಇನ್ನೂ 25 ತುಂಬೆ ಲ್ಯಾಬ್, ಹೆಚ್ಚುವರಿಯಾಗಿ 100 ತುಂಬೆ ಫಾರ್ಮಸಿಗಳು, 25 ನ್ಯೂಟ್ರಿಪ್ಲಸ್ ಔಟ್‌ಲೆಟ್‌ಗಳು, ರೆ ಆ್ಯಂಡ್ ಮೋ ಆಪ್ಟಿಕಲ್ಸ್‌ನ 25 ಔಟ್‌ಲೆಟ್‌ಗಳು ಹಾಗೂ ಘಾನಾ, ಮಲೇಶ್ಯ ಮತ್ತು ಭಾರತದಲ್ಲಿ ಇನ್ನೂ ಮೂರು ವಿವಿ ಕ್ಯಾಂಪಸ್‌ಗಳನ್ನು 2020ರ ಅಂತ್ಯದೊಳಗೆ ಆರಂಭಿಸಲೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ ಸಮೂಹವು 6,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಮತ್ತು 2020ರ ಅಂತ್ಯದ ವೇಳೆಗೆ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 15,000 ತಲುಪಲಿದೆ. ಈ ವಿಸ್ತರಣಾ ಯೋಜನೆಗೆ ಒಟ್ಟ್ಟು 1.2 ಬಿಲಿಯನ್ ಎಇಡಿ ಹೂಡಿಕೆಯನ್ನು ಅಂದಾಜಿಸಲಾಗಿದೆ. ಅಜ್ಮಾನ್‌ನ ಅಲ್ ಜರ್ಫ್‌ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ಯಾಂಪಸ್‌ನಲ್ಲಿ 400 ಹಾಸಿಗೆಗಳ ನೂತನ ತರಬೇತಿ ಆಸ್ಪತ್ರೆ, 60 ಚಯರ್‌ಗಳ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಹೈ-ಟೆಕ್ ಪುನರ್ವಸತಿ ಕೇಂದ್ರಗಳು ತಲೆಯೆತ್ತಲಿವೆ. ಇದು ಜಿಎಂಯು ಅಧೀನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ಹೆಚ್ಚಿಸಲಿದೆ.

  ನೂತನ ಯೋಜನೆ 2017-18ರಲ್ಲಿ ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. 3,20,00 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ 4 ಅಂತಸ್ತುಗಳ ಆಸ್ಪತ್ರೆಯು 120 ಕ್ಲಿನಿಕ್‌ಗಳನ್ನು ಹೊಂದಿರಲಿದೆ. 400 ಹಾಸಿಗೆಗಳ ಈ ಆಸ್ಪತ್ರೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರಲಿದೆ. ಪಿಇಟಿ-ಸಿಟಿ ಸ್ಕಾನ್‌ನೊಂದಿಗೆ ಪೂರ್ಣ ಪ್ರಮಾಣದ ರೇಡಿಯಾಲಜಿ ವಿಭಾಗದೊಂದಿಗೆ ಸಜ್ಜಾಗಿರಲಿದೆ. ಅತ್ಯಾಧುನಿಕ ಡಯಾಗ್ನಾಸ್ಟಿಕ್ಸ್ ಸೌಲಭ್ಯಗಳನ್ನೊಳಗೊಂಡು ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯದ ವೈದ್ಯಕೀಯ ತರಬೇತಿ ನೀಡುವ ವ್ಯವಸ್ಥೆಯನ್ನೊಳಗೊಂಡ ಆಸ್ಪತ್ರೆಯಾಗಿ ನಿರ್ಮಾಣಗೊಳ್ಳಲಿದೆ.

   ತುಂಬೆ ಸಮೂಹ ಸಂಸ್ಥೆಯ ನೂತನ ಆಸ್ಪತ್ರೆಗಳ ಯೋಜನೆಗಳಿಗೆ ಕತರ್, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಘಾನಾದಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗುವುದು.

 ತುಂಬೆ ಸಮೂಹ ಸಂಸ್ಥೆಯು ಯುಎಇಯ ತನ್ನ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯ ವೈದ್ಯಕೀಯ ಸೌಲಭ್ಯಗಳು ಮತ್ತು ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 20 ದೇಶಗಳಲ್ಲಿ ಪ್ರತಿನಿಧಿ ಕಚೇರಿಗಳನ್ನು ತೆರೆಯಲಿದೆ ಎಂದು ಸಂಸ್ಥೆಯ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News