×
Ad

ದಮಾಮ್ : ಗಾಂಧಿವಾದದ ಹತ್ಯೆಯನ್ನು ತಡೆಯಲು ಇಂಡಿಯನ್ ಸೋಶಿಯಲ್ ಫೋರಮ್ ಕರೆ

Update: 2016-01-30 19:32 IST

ದಮಾಮ್, ಜ. 28: 1948 ಜನವರಿ 30ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಹತ್ಯೆಯನ್ನು ನಡೆಸಿದ್ದ ಫ್ಯಾಷಿಸಮ್ ಪರಿವಾರವು ಪದೇಪದೇ ಗಾಂಧಿವಾದವನ್ನೂ ಹತ್ಯೆಗೈಯುತ್ತಲೇ ಬಂದಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಅಸಹಿಷ್ಣುತೆ ತಾರಕಕ್ಕೇರಿ ದಾಬೋಳ್ಕರ್, ಕಲ್ಬುರ್ಗಿ, ವೇಮುಲ ಮುಂತಾದವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಜನವರಿ 30ರ ಗಾಂಧಿ ಹತ್ಯೆಯ ದಿನವನ್ನು ಅವಲೋಕನ ನಡೆಸುತ್ತಾ ಗಾಂಧಿವಾದದ ಹತ್ಯೆಗೆ ತಡೆಯುವ ನಿಟ್ಟಿನಲ್ಲಿ ಯುವತಲೆಮಾರು ಸನ್ನದ್ಧವಾಗಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್  ಭಾರತೀಯ ಸಮುದಾಯಕ್ಕೆ ಕರೆ ನೀಡುತ್ತಿದೆ.

ಸಮಗ್ರ ಕಲ್ಯಾಣ ರಾಜ್ಯದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಾತ್ಯತೀತ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಹತ್ಯೆಯು ಜಾತ್ಯತೀತ ಸಿದ್ಧಾಂತಗಳನ್ನು ನಿರ್ಮೂಲನೆಗೊಳಿಸುವ ದೇಶದ್ರೋಹಿಗಳ ಯೋಜನೆಯ ಭಾಗವಾಗಿದೆ.  ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅವರ ತತ್ವಾದರ್ಶಗಳನ್ನು ಸದಾ ಸ್ಮರಿಸುವುದರ ಜೊತೆಗೆ ಅವರ ಹಂತಕರ ಗುರುತು ಪರಿಚಯ, ಹಿನ್ನೆಲೆಯನ್ನೂ ಅರಿತುಕೊಳ್ಳಬೇಕಾಗಿದೆ.

ಗಾಂಧಿ ಹತ್ಯೆಯೊಂದಿಗೆ ಆರಂಭಗೊಂಡ ಭಯೋತ್ಪಾದನಾ ಕೃತ್ಯಗಳು ಇಂದಿಗೂ ಮುಂದುವರಿದಿರುವುದು ಅತಿದೊಡ್ಡ ದುರಂತವಾಗಿದೆ. ಗಾಂಧಿ ಹಂತಕ ಗೋಡ್ಸೆಯ ಪ್ರತಿಮೆ ಪ್ರತಿಷ್ಠಾಪಿಸಿ ಮಂದಿರ ನಿರ್ಮಿಸಲು ಬಹಿರಂಗವಾಗಿ ಫ್ಯಾಶಿಷ್ಟ್ ಶಕ್ತಿಗಳು

ಆಗ್ರಹಿಸುತ್ತಿರುವುದು ದೇಶದ ಸಾರ್ವಭೌಮತೆಗೆ ಅತಿದೊಡ್ಡ ಬೆದರಿಕೆಯಾಗಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಹೋರಾಟ ನಡೆಸುವುದೇ ಗಾಂಧಿವಾದವೆನಿಸಿಕೊಳ್ಳುತ್ತದೆ ಎಂಬುದು ಇಂಡಿಯನ್ ಸೋಶಿಯಲ್ ಫೋರಮ್ ನ ನಂಬಿಕೆಯಾಗಿದೆ.

ಗಾಂಧೀಜಿ ಪ್ರತಿಪಾದಿಸಿದ್ದ ದೇಶದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ರೈತರು, ಹಳ್ಳಿಪ್ರದೇಶ, ಅಲ್ಪಸಂಖ್ಯಾತ ಸಮುದಾಯ, ದಲಿತರು, ಬಡವರು ಸೇರಿದಂತೆ ಒಟ್ಟು ಭಾರತೀಯ ಸಮುದಾಯದ ಸಬಲೀಕರಣದ ಆಶಯವಿತ್ತು. ಇಂತಹ ಆಶಯಗಳಿಗೆ ಕೊಳ್ಳಿಯಿಟ್ಟು ಬಂಡವಾಳಶಾಹಿಗಳ, ಕಾರ್ಪೋರೇಟ್ ಕಂಪೆನಿಗಳ ಪರವಾದ ಅಭಿವೃದ್ಧಿ ಯೋಜನೆಗಳನ್ನು ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ದೇಶದ ವಿದೇಶಾಂಗ ನೀತಿಗಳು ಕೂಡ  ಗಾಂಧಿ ತತ್ವಕ್ಕೆ ವಿರುದ್ಧವಾಗಿ ಮಾರ್ಪಾಡುಗೊಂಡಿರುವುದನ್ನು ನಾವು ಮನಗಾಣಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಗಾಂಧೀಜಿಯ ಹೋರಾಟದ ಇತಿಹಾಸವನ್ನು ಪುನರಾವರ್ತಿಸುವ ಮೂಲಕ ಗಾಂಧೀಜಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಇಂಡಿಯನ್ ಸೋಶಿಯಲ್ ಫೋರಮ್

ಕರ್ನಾಟಕ ರಾಜ್ಯ

ಈಸ್ಟರ್ನ್ ಪ್ರೊವಿನ್ಸ್, ಸೌದಿಅರೇಬಿಯ

Writer - ಎ.ಎಮ್. ಆರೀಫ್ ಜೋಕಟ್ಟೆ

contributor

Editor - ಎ.ಎಮ್. ಆರೀಫ್ ಜೋಕಟ್ಟೆ

contributor

Similar News