×
Ad

ಜಿದ್ದಾ ಕಾನ್ಸುಲ್ ಜನರಲ್ ಆಗಿ ನೂರ್ ರಹಮಾನ್ ಶೇಖ್

Update: 2016-02-01 18:15 IST

ಜಿದ್ದಾ, ಫೆ. 1: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಭಾರತೀಯ ಖಾಯಂ ಮಿಶನ್‌ನ ಪ್ರಥಮ ಕಾರ್ಯದರ್ಶಿಯಾಗಿರುವ ಮುಹಮ್ಮದ್ ನೂರ್ ರಹಮಾನ್ ಶೇಖ್‌ರನ್ನು ಜಿದ್ದಾದ ಭಾರತೀಯ ಕಾನ್ಸುಲ್ ಜನರಲ್ ಆಗಿ ನೇಮಿಸಲಾಗಿದೆ.

ಹಾಲಿ ಕಾನ್ಸುಲರ್ ಜನರಲ್ ಬಿ.ಎಸ್. ಮುಬಾರಕ್ ಜಿದ್ದಾದಲ್ಲಿನ ತನ್ನ ಮೂರು ವರ್ಷಗಳ ಅವಯ ಪೈಕಿ ಎರಡು ವರ್ಷಗಳನ್ನು ಪೂರೈಸಿ ಭಾರತಕ್ಕೆ ವಾಪಸಾಗುತ್ತಿದ್ದಾರೆ.

ತನ್ನ ನೂತನ ನೇಮಕಾತಿಯ ಬಗ್ಗೆ ಶೇಖ್ ಹರ್ಷ ವ್ಯಕ್ತಪಡಿಸಿದ್ದಾರೆ. ‘‘ಜಿದ್ದಾದಲ್ಲಿ ಭಾರತೀಯ ಕಾನ್ಸುಲರ್ ಜನರಲ್ ಆಗಿ ನನ್ನನ್ನು ನೇಮಕ ಮಾಡಿರುವ ಸುದ್ದಿ ನನ್ನ ಹುಟ್ಟಿದ ದಿನದಂದು ನನಗೆ ತಲುಪಿತು. ಅದು ನನ್ನ ಹುಟ್ಟಿದ ದಿನದ ಸಂತೋಷವನ್ನು ಇಮ್ಮಡಿಗೊಳಿಸಿತು’’ ಎಂದು ಶೇಖ್ ಶನಿವಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.

ಶೇಖ್ ಇತ್ತೀಚಿನವರೆಗೂ ಜಿದ್ದಾದಲ್ಲಿ ಉಪ ಕಾನ್ಸುಲ್ ಜನರಲ್ ಹಾಗೂ ಹಜ್ ಕಾನ್ಸುಲ್ ಆಗಿ ಕಾರ್ಯನಿರ್ವಹಿಸಿದ್ದರು. ಅವರು ಮೂರು ತಿಂಗಳ ಹಿಂದೆಯಷ್ಟೇ ನ್ಯೂಯಾರ್ಕ್‌ಗೆ ತೆರಳಿದ್ದರು.

ತಾನು ಅನುಬಂಧ ಹೊಂದಿರುವ ನಗರಕ್ಕೆ ಶೇಖ್ ವಾಪಸಾಗುತ್ತಿದ್ದಾರೆ. ಅವರು ಜಿದ್ದಾ ಮತ್ತು ಸುತ್ತಮುತ್ತಲಿನ ಭಾರತೀಯ ನಿವಾಸಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

ಮಣಿಪುರದ ಇಂಫಾಲ ನಿವಾಸಿಯಾಗಿರುವ ಶೇಖ್, ಭಾರತೀಯ ವಿದೇಶ ಸೇವೆ (ಐಎಎಸ್) ಅಧಿಕಾರಿ. ಅವರ ಮೊದಲ ಆದ್ಯತೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಹಾಗೂ ಎರಡನೆಯದು ರಾಜತಾಂತ್ರಿಕತೆ.

ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯಕ್ಕೆ ಜಿದ್ದಾ ಕಾನ್ಸುಲ್ ಜನರಲ್ ಅತ್ಯಂತ ಮಹತ್ವದ ಹುದ್ದೆಯಾಗಿದೆ. ಯಾಕೆಂದರೆ, ಪ್ರತಿ ವರ್ಷ ಹಜ್‌ಗೆ ತೆರಳುವ ಸುಮಾರು 1,70,000 ಭಾರತೀಯರಿಗೆ ವ್ಯವಸ್ಥೆಗಳನ್ನು ಮಾಡಿಕೊಡುವ ಜವಾಬ್ದಾರಿಯನ್ನು ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News