ಗಿನ್ನೆಸ್ ದಾಖಲೆಯಲ್ಲಿ ಪಾಲು ಪಡೆದ ಯುಎಇ ಅನಿವಾಸಿ ಮಹಿಳೆಯರು
3,377 ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ನಿರ್ಮಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನು ಮುರಿಯುವ ಉದ್ದೇಶದಿಂದ ಆರಂಭದಲ್ಲಿ ಈ ಮಹಿಳೆಯರು 5 ಸಾವಿರ ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ರಚಿಸಲು ಉದ್ದೇಶಿಸಿದ್ದರು. ಆದರೆ ಅಂತಿಮವಾಗಿ ಅವರು 11,148 ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ತಯಾರಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ದುಬೈ: ಯುಎಇ, ಭಾರತ ಸೇರಿದಂತೆ ವಿಶ್ವದ ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳ ಪರಿಶ್ರಮ ಹಲವು ತಿಂಗಳುಗಳ ಪರಿಶ್ರಮ ಹಾಗೂ ಶ್ರದ್ಧೆ ಕೊನೆಗೂ ಫಲ ನೀಡಿದೆ. ವಿಶ್ವದ ಅತಿ ದೊಡ್ಡ ಕಂಬಳಿಯನ್ನು ಹೊಲಿದ ಗಿನ್ನೆಸ್ ದಾಖಲೆಗೆ ಅವರು ಭಾಜನರಾಗಿದ್ದಾರೆ.
ಚೆನ್ನೈಮೂಲದ ಶುಭಶ್ರೀ ನಟರಾಜನ್ ನೇತೃತ್ವದ ‘ಭಾರತ ಮಾತೆಯ ನೆಯ್ಗೆ ರಾಣಿಯರು (ಎಂಐಸಿಕ್ಯೂ)’ ತಂಡವು ಕಳೆದ ವರ್ಷ ದಕ್ಷಿಣ ಆಫ್ರಿಕದ ತಂಡವೊಂದು ಕಂಬಳಿ ನೆಯ್ಗೆಯಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದೆ. 3,377 ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ನಿರ್ಮಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನು ಮುರಿಯುವ ಉದ್ದೇಶದಿಂದ ಆರಂಭದಲ್ಲಿ ಈ ಮಹಿಳೆಯರು 5 ಸಾವಿರ ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ರಚಿಸಲು ಉದ್ದೇಶಿಸಿದ್ದರು. ಆದರೆ ಅಂತಿಮವಾಗಿ ಅವರು 11,148 ಚ.ಕಿ.ಮೀ. ವಿಸ್ತೀರ್ಣದ ಕಂಬಳಿಯನ್ನು ತಯಾರಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಪ್ರಯತ್ನದಲ್ಲಿ ಜಗತ್ತಿನಾದ್ಯಂತದ 1450 ಮಹಿಳೆಯರು ಹಾಗೂ ಕೆಲವು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯುಎಇನಿಂದ 62 ಮಂದಿ ಪಾಲ್ಗೊಂಡಿದ್ದು, ಅವರಲ್ಲಿ ಐವರು ಮಕ್ಕಳು ಹಾಗೂ 70 ವರ್ಷ ವಯಸ್ಸಿನ ಇಬ್ಬರು ವೃದ್ಧೆಯರೂ ಸೇರಿದ್ದಾರೆ. ಆರಂಭದಲ್ಲಿ ಅವರು 100 ಕಂಬಳಿ ತುಂಡುಗಳನ್ನು ಹೆಣೆಯಲು ಒಪ್ಪಿಕೊಂಡಿದ್ದರು. ಆದರೆ ಅಂತಿಮವಾಗಿ 211 ಕಂಬಳಿಯ ತುಣುಕುಗಳನ್ನು ಅವರು ನಿರ್ಮಿಸಿದ್ದರು. ಚೌಕಾಕೃತಿಯ 40X
40 ಇಂಚು ವಿಸ್ತೀರ್ಣದ ಚಿಕ್ಕ ಕಂಬಳಿಯ ತುಣುಕುಗಳನ್ನು ಹೆಣೆದು ಈ ದೈತ್ಯ ಕಂಬಳಿಯನ್ನು ನಿರ್ಮಿಸಲಾಗಿದೆ. ಚೆನ್ನೈಯಲ್ಲಿ ಇತ್ತೀಚೆಗೆ ‘ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್’ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರ ಪ್ರವೀಣ್ ಪಟೇಲ್ ಅವರ ಸಮಕ್ಷಮದಲ್ಲಿ ಈ ಬೃಹತ್ ಕಂಬಳಿಯನ್ನು ಪ್ರದರ್ಶಿಸಲಾಯಿತು. ಯುಎಇನಿಂದ ಪಾಲ್ಗೊಂಡವರ ಪೈಕಿ ಮೂವರು ಈ ಅಧಿಕೃತ ಗಿನ್ನೆಸ್ ದಾಖಲೆ ಸಮಾರಂಭವನ್ನು ವೀಕ್ಷಿಸಲು ಚೆನ್ನೈಗೆ ತೆರಳಿದ್ದರು. ನಮಗೆಲ್ಲರಿಗೂ ಇದೊಂದು ಮಹಾನ್ ಕ್ಷಣವೆಂದು ಈ ಸಾಹಸದಲ್ಲಿ ಪಾಲ್ಗೊಂಡ ದುಬೈ ನಿವಾಸಿ ಪ್ರಿಯಾ ಶಿವಕುಮಾರ್ ತಿಳಿಸಿದ್ದಾರೆ.
ಯುಎಇನ ಸಮನ್ವಯಕಾರಿಣಿಯಾದ ವಿನೋದಿನಿ ರಮೇಶ್ ಬಾಬು ತಂಡದ ಪರವಾಗಿ ಸ್ಮರಣಿಕೆಯೊಂದನ್ನು ಸ್ವೀಕರಿಸಿದರು. ಸುದೀರ್ಘ ಸಮಯದಿಂದ ಮರೆಯಾಗಿದ್ದ ಕಂಬಳಿಯ ಕರಕುಶಲ ನೆಯ್ಗೆ ಕಲೆಯು, ಇದರಿಂದಾಗಿ ಪುನರುಜ್ಜೀವನ ಪಡೆದುಕೊಂಡಿದೆಯೆಂದು ಪ್ರಿಯಾ ಹೇಳುತ್ತಾರೆ. ಒಂದು ಮಹಾನ್ ಉದ್ದೇಶಕ್ಕಾಗಿ ಈ ದಾಖಲೆಯನ್ನು ಸಾಧಿಸಿರುವುದು ತಮಗೆಲ್ಲರಿಗೂ ಸಂತಸ ತಂದಿದೆಯೆಂದು ವಿನೋದಿನಿ ಹೇಳುತ್ತಾರೆ. ‘‘ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ ಬಳಿಕ, ಈ ದೈತ್ಯಗಾತ್ರದ ಕಂಬಳಿಯನ್ನು ಸಣ್ಣ ಕಂಬಳಿಗಳಾಗಿ ವಿಭಜಿಸಿ ಅವನ್ನು ವೃದ್ಧರು ಹಾಗೂ ಮಕ್ಕಳ ಉಪಯೋಗಕ್ಕಾಗಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ದಾನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.