×
Ad

ಸೌದಿ : ಸಾರ್ವಜನಿಕ ಸಾರಿಗೆ ವಾಹನಗಳ ಚಾಲಕರಿಗೆ ಡ್ರಗ್ಸ್ ಸೇವನೆ ತಪಾಸಣೆ ಕಡ್ಡಾಯ

Update: 2016-02-05 17:49 IST

ಜಿದ್ದಾ: ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕ್ರಮಗಳ ಭಾಗವಾಗಿ ಸೌದಿ ಆಡಳಿತವು ಎಲ್ಲಾ ಟಾಕ್ಸಿಗಳು, ಶಾಲಾ ಬಸ್‌ಗಳು ಹಾಗೂ ಇತರ ಸಾರ್ವಜನಿಕ ಸಾರಿಗೆ ವಾಹನಗಳ ಚಾಲಕರಿಗೆ ವಾರ್ಷಿಕ ಮಾದಕದ್ರವ್ಯ (ಡ್ರಗ್ಸ್) ಸೇವನೆ ತಪಾಸಣೆ ಪರೀಕ್ಷೆಯನ್ನು ನಡೆಸಲಿದೆ.

ಈ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾದ ಸಮಿತಿಯೊಂದರ ಶಿಫಾರಸಿನ ಹಿನ್ನೆಲೆಯಲ್ಲಿ ಈ ತಪಾಸಣೆಯನ್ನು ನಡೆಸಲಾಗುತ್ತಿದೆ. ಆದರೆ ಸಾರ್ವಜನಿಕ ಸಾರಿಗೆ ಕುರಿತ ಕಾನೂನು ಭವಿಷ್ಯದಲ್ಲಿ ತಿದ್ದುಪಡಿಗೊಳ್ಳುವ ನಿರೀಕ್ಷೆಯಿರುವುದರಿಂದ, ಈ ನಿರ್ಧಾರದಲ್ಲಿ ಇನ್ನೂ ಬದಲಾವಣೆಯಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

     ಸೌದಿಯ ಸಾರ್ವಜನಿಕ ಸಂಪರ್ಕ ವ್ಯವಹಾರಗಳ ನಿರ್ದೇಶಕ ಹಾಗೂ ಮಕ್ಕಾದ ಸಾರಿಗೆ ಸಚಿವಾಲಯದ ಪತ್ರಿಕಾ ವಕ್ತಾರ ಉಮರ್ ಬಮಸ್‌ಫಾರ್, ಇತ್ತೀಚೆಗೆ ನೀಡಿದ ಹೇಳಿಕೆಯೊಂದರಲ್ಲಿ, ಸಾರ್ವಜನಿಕ ಸಾರಿಗೆ ವಾಹನಗಳನ್ನು ನಿರ್ವಹಿಸುವವರು ಮಾದಕದ್ರವ್ಯ ಸೇವನೆ ತಪಾಸಣಾ ಪರೀಕ್ಷೆಗೆ ಒಳಪಡಬೇಕು ಹಾಗೂ ಅವರು ಯಾವುದೇ ಕ್ರಿಮಿನಲ್ ಅಪರಾಧ ದಾಖಲೆಗಳನ್ನು ಹೊಂದಿರಬಾರದು ಮತ್ತು ತಮ್ಮ ಪ್ರಾಯೋಜಕರಿಂದ ದೃಢೀಕರಣ ಪತ್ರವನ್ನು ಪಡೆದಿರಬೇಕು ಎಂದರು.

ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸಾಗಿಸುವ ಬಸ್‌ಗಳು ಅವಘಡಕ್ಕೀಡಾದ ಹಲವು ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವಾಲಯವು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News