ಸೌದಿ : ತಂಬಾಕು, ಮಾದಕ ದ್ರವ್ಯ ಪಿಡುಗಿನ ವಿರುದ್ಧ ಹೋರಾಟ
ಜಿದ್ದಾ: ಸೌದಿ ಅರೇಬಿಯದಲ್ಲಿ ಸಿಗರೇಟ್ ಚಟಕ್ಕೆ ಪ್ರತಿದಿನ 5 ಕೋಟಿ ಸೌದಿ ರಿಯಾಲ್ ಬೂದಿಯಾಗುತ್ತದೆ. ಇದರ ಜೊತೆಗೆ ಧೂಮಪಾನದಿಂದಾಗಿ ಪ್ರತಿ ವರ್ಷ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ತಂಬಾಕು ಹಾಗೂ ಮಾದಕದ್ರವ್ಯ ವಿರೋಧಿ ಸಂಘಟನೆಯೊಂದರ ವರಿಷ್ಠರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿಯೇ, ಸುಮಾರು 23 ಸಾವಿರ ಮಂದಿ ಧೂಮಪಾದ ದುಷ್ಪರಿಣಾಮದಿಂದ ಮೃತಪಟ್ಟಿದ್ದಾರೆಂದು ತಂಬಾಕು ಹಾಗೂ ಮಾದಕದ್ರವ್ಯ ಹೋರಾಟ ಸೊಸೈಟಿ ಅಧ್ಯಕ್ಷ ಶೇಖ್ ಅಬ್ದುಲ್ಲಾ ಅಲ್ ಒದೈಮ್ ಹೇಳಿರುವುದನ್ನು ಸ್ಥಳೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ತಂಬಾಕು ಹಾಗೂ ಮಾದಕದ್ರವ್ಯ ಹೋರಾಟ ಸೊಸೈಟಿಯು ಕಾಫಾ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಕಾಫಾ ಎಂದರೆ ಅರೇಬಿಕ್‌ನಲ್ಲಿ ಸಾಕು ಎಂಬರ್ಥವಿದೆ.
ಇತ್ತೀಚೆಗೆ ಜಿದ್ದಾದಲ್ಲಿ , ಮಕ್ಕಾದ ಮಹಾಮಸೀದಿಯ ಧರ್ಮಗುರು ಹಾಗೂ ಇಮಾಮ್ ಶೇಖ್ ಖಾಲಿದ್‌ಅಲ್ ಗಾಮ್ದಿ ಅವರ ಪ್ರಾಯೋಜಕತ್ವದಲ್ಲಿ ಕಿಂಗ್ ಅಬ್ದುಲ್ ಆಝೀಝ್ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾಫಾದ ಎರಡನೆ ವಾರ್ಷಿಕ ಜಾಗೃತಿ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಮಾದಕದ್ರವ್ಯ ವ್ಯಸನಿಗಳು ತಮ್ಮ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದ್ದಾರೆ.ಕಾಫಾವು ಇತ್ತೀಚೆಗೆ ವಿಶೇಷ ವೈದ್ಯರ ಮೇಲ್ವಿಚಾರಣೆಯಡಿ ಮಾದಕದ್ರವ್ಯ ವ್ಯಸನಿಗಳಿಗಾಗಿ ಪುನರ್ವಸತಿ ಹಾಗೂ ಪಾಲನೆ ಕೇಂದ್ರವನ್ನು ತೆರೆದಿದ್ದಾರೆ.ತನ್ನ ಆರು ಶಾಖೆಗಳ ಮೂಲಕ ಮಕ್ಕಾದಲ್ಲಿ ತನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಫಾಗೆ ಈ ಕೇಂದ್ರವು ನೆರವು ನೀಡುತ್ತಿದೆಯೆಂದು ಅವರು ತಿಳಿಸಿದರು.
ಕಾಫಾಗೆ ನಿರಂತರವಾದ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತಿರುವ ಸೌದಿಯ ನಾಯಕರಿಗೆ ಹಾಗೂ ಮಕ್ಕಾದ ಗವರ್ನರ್, ಯುವರಾಜ ಖಾಲಿದ್ ಅಲ್ ಫೈಸಲ್ ಹಾಗೂ ಜಿದ್ದಾ ಗವರ್ನರ್ ಯುವರಾಜ ಮಿಶಾಲ್ ಬಿನ್ ಮಜೀದ್ ಅವರಿಗೆ ಶೇಖ್ ಅಬ್ದುಲ್ಲಾ ಅಲ್ ಒದೈಮ್ ಈ ಸಂದರ್ಭದಲ್ಲಿ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.ದೇಶದಲ್ಲಿ ತಂಬಾಕು ಹಾಗೂ ಮಾದಕದ್ರವ್ಯ ಚಟದ ವಿರುದ್ಧದ ಸಮರವು, ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧ ಹೋರಾಡುವಷ್ಟೇ ಮಹತ್ವದ್ದಾಗಿದೆಯೆಂದವರು ಹೇಳಿದರು.