×
Ad

ಜನಮನ ಸೂರೆಗೊಂಡ “ಮೊಗವೀರ್ಸ್ ಬಹ್ರೈನ್”ನ ಸಾಂಸ್ಕೃತಿಕ ಸ್ಪರ್ಧಾ ಉತ್ಸವ “ಸೋಡ್‍ಪಾಡ್ – 2016”

Update: 2016-03-16 17:01 IST

ಬಹ್ರೈನ್: ತನ್ನ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದಶ-ವಿಶೇಷ ಕಾರ್ಯಕ್ರಮಗಳ ಪೈಕಿ ಹತ್ತನೆಯ ತಥಾ ಅಂತಿಮ ಕಾರ್ಯಕ್ರಮವಾಗಿ ‘ಮೊಗವೀರ್ಸ್ ಬಹ್ರೈನ್’ ಸಂಸ್ಥೆಯು ‘ಸೋಡ್‍ಪಾಡ್ - 2016’ ಎಂಬ ಶೀರ್ಷಿಕೆಯಡಿ ಬಹ್ರೈನ್‍ನ ಅನಿವಾಸಿ ತುಳು-ಕನ್ನಡಿಗರಿಗಾಗಿ ‘ಮುಕ್ತ ವಿವಿಧ ವಿನೋದಾವಳಿಗಳ ಸ್ಪರ್ಧೆ’ಯನ್ನು ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಮುಂದಾಳತ್ವದಲ್ಲಿ ಇತ್ತೀಚೆಗೆ ಅತಿ ಯಶಸ್ವಿಯಾಗಿ ಆಯೋಜಿಸಿತು. 

ತುಳುನಾಡ ಸೊಗಡಿನ ಸಂಕೇತವಾಗಿ ‘ಅಟಿಲ್’ ಶೀರ್ಷಿಕೆಯೊಂದಿಗೆ ‘ಬೃಹತ್ ಕರಾವಳಿ ಖಾದ್ಯಮೇಳ’ಗಳನ್ನೂ, ‘ತುಡರ್ ಕಪ್’ ಶೀರ್ಷಿಕೆಯೊಂದಿಗೆ ‘ಮುಕ್ತ ಕ್ರಿಕೆಟ್ ಪಂದ್ಯಾಟ’ಗಳನ್ನೂ ಗತ ಕೆಲವು ವರ್ಷಗಳಿಂದ ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಅತಿ ಯಶಸ್ವಿಯಾಗಿ ಸಂಘಟಿಸುತ್ತಾ ಬಂದಿರುವ ‘ಮೊಗವೀರ್ಸ್ ಬಹ್ರೈನ್’ ಸಂಸ್ಥೆಯು ಇಗ ಮತ್ತೊಮ್ಮೆ ‘ಸೋಡ್‍ಪಾಡ್’ ಎಂಬ ಪ್ರಬಲ ಪೈಪೋಟಿಯನ್ನು ಸೂಚಿಸುವ ಕರಾವಳಿ ಸೊಗಡಿನ ಪದನಾಮದೊಂದಿಗೆ ಅತ್ಯಾಕರ್ಷಕ ವಿವಿಧ ವಿನೋದಾವಳಿಗಳ ಸ್ಪರ್ಧೆಯನ್ನು ಸಂಯೋಜಿಸಿ ಅನಿವಾಸಿ ಸಮೂಹದ ಹೃನ್ಮನವನ್ನು ಸೂರೆಗೊಳಿಸಿತು.        

ತುಳು-ಕನ್ನಡ ಸಾಂಸ್ಕೃತಿಕ ಸ್ಪರ್ಧಾ ಉತ್ಸವವಾಗಿದ್ದ ಈ ಕಾರ್ಯಕ್ರಮದಲ್ಲಿ ದ್ವೀಪ ರಾಷ್ಟ್ರದ 5 ಪ್ರಬಲ ಕಲಾ ತಂಡಗಳು ಭಾಗಿಯಾಗಿದ್ದು, ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನೆರೆದ ಕಲಾರಸಿಕರನ್ನು ರಂಜಿಸಿತು. ಪ್ರಹಸನ, ನೃತ್ಯ, ಹಾಡು, ಛದ್ಮವೇಷ ಮತ್ತು ಆಶು ಭಾಷಣದಂತಹ ಐದು ವಿವಿಧ ಸಾಂಸ್ಕೃತಿಕ ಪ್ರಕಾರಗಳಿದ್ದ ಈ ಪ್ರತಿಭಾ ಸ್ಪರ್ಧೆಯಲ್ಲಿ ಭಾಗಿಯಾದ ಕಲಾ ತಂಡಗಳ ಮಧ್ಯೆ ತೀವ್ರ ತರದ ಮುಖಾಮುಖಿ ಕಂಡು ಬಂದಿದ್ದು, ಅಂತಿಮದಲ್ಲಿ ಇತರರಿಗಿಂತ ಮಿಗಿಲೆನಿಸಿಕೊಂಡ ಚೇತನಾ ರಾಜೇಂದ್ರ ಹೆಗ್ಡೆ ನಾಯಕತ್ವದ ‘ವಾತ್ಸಲ್ಯ’ ಕಲಾ ತಂಡವು ಪ್ರಥಮ, ಪ್ರತಿಮಾ ಅರುಣ್ ಶೆಟ್ಟಿ ನಾಯಕತ್ವದ ‘ಬಂಟ್ಸ್ ಬಹ್ರೈನ್’ ಕಲಾ ತಂಡವು ದ್ವಿತೀಯ ಮತ್ತು ಪ್ರತಿಮಾ ರಾಜ್ ಬೆದ್ರ ನಾಯಕತ್ವದ ‘ಜಿ.ಎಸ್.ಎಸ್. - ಸಿರಿ ಸಂಪದ’ ಕಲಾ ತಂಡವು ತೃತೀಯ ಸ್ಥಾನವನ್ನು ಗೆದ್ದುಕೊಂಡಿತು. ಅಂತೆಯೇ ಉಮ್ಮರ್ ಸಾಹೇಬ್ ನಾಯಕತ್ವದ ‘ಕಾವೇರಿ’ ಕಲಾ ತಂಡವು ತನ್ನ ಪ್ರತಿಭಾಪೂರ್ಣ ನಿರ್ವಹಣೆಗಾಗಿ ಮತ್ತು ಶೇಖರ್ ಬಳ್ಳಾರಿ ನಾಯಕತ್ವದ ‘ಕಲಾಶ್ರೀ’ ಕಲಾ ತಂಡವು ತನ್ನ ಅಚ್ಚುಕಟ್ಟಿನ ನಿರ್ವಹಣೆಗಾಗಿ ಎರಡು ಪ್ರತ್ಯೇಕ ತಂಡ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಅದೇ ರೀತಿ ಪ್ರತಿ ತಂಡಗಳಲ್ಲೂ ಸವ್ಯಸಾಚಿ ನಿರ್ವಹಣೆಯೊಂದಿಗೆ ಮೇರು ಪ್ರತಿಭಾಶಾಲಿಗಳೆಂದು ಗುರುತಿಸಲ್ಪಟ್ಟ ಮೂವರು ಕಲಾವಿದರಿಗೆ ‘ಶ್ರೇಷ್ಠ ಪ್ರತಿಭಾ ಪುರಸ್ಕಾರ’ವನ್ನು ನೀಡಿ ಗೌರವಿಸಲಾಯಿತು.

ಅದರಂತೆ ‘ಕಲಾಶ್ರೀ’ ತಂಡದ ಶೇಖರ್ ಬಳ್ಳಾರಿ, ಶೋಭಾ ರಾಮ್‍ಪ್ರಸಾದ್ ಮತ್ತು ಧಳ್ವಿ ರಾಮ್‍ಪ್ರಸಾದ್, ‘ಬಂಟ್ಸ್ ಬಹ್ರೈನ್’ ತಂಡದ ಮೋಹನ್‍ದಾಸ್ ರೈ, ಪ್ರತಿಮಾ ಅರುಣ್ ಶೆಟ್ಟಿ ಮತ್ತು ಶ್ರಾವ್ಯ ಶೆಟ್ಟಿ, ‘ವಾತ್ಸಲ್ಯ’ ತಂಡದ ಅಭಿಜಿತ್ ಶೆಟ್ಟಿ, ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಅಮನ್ ನಾರಾಯಣ್, ‘ಜಿ.ಎಸ್.ಎಸ್. - ಸಿರಿ ಸಂಪದ’ ತಂಡದ ಪ್ರತಿಮಾ ರಾಜ್ ಬೆದ್ರ, ಸುರೇಖಾ ಸಂತೋಷ್ ಮತ್ತು ಶಿವಾನಿ ರಾಜ್ ಬೆದ್ರ ಹಾಗೂ ‘ಕಾವೇರಿ’ ತಂಡದ ಕರುಣಾಕರ್ ಪದ್ಮಶಾಲಿ, ಪೂರ್ಣಿಮಾ ಜಗದೀಶ್ ಮತ್ತು ಪೂರ್ವಜಾ ಜಗದೀಶ್ ವೈಯಕ್ತಿಕ ಪ್ರಶಸ್ತಿಗಳಿಗೆ ಅರ್ಹರಾದರು.   

ಆರಂಭದಲ್ಲಿ ತಾಯ್ನಾಡಿನ ಸಾಂಸ್ಕೃತಿಕ ಕುರುಹಾಗಿರುವ ದಾಸರ ಜಾಗಟೆಯ ನಾದದೊಂದಿಗೆ ಚಾಲನೆ ಕಂಡ ಈ ಕಾರ್ಯಕ್ರಮದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಬಹ್ರೈನ್‍ನ ವಿವಿಧ ತುಳು-ಕನ್ನಡ ಸಂಸ್ಥೆಗಳ ಗೌರವಾನ್ವಿತ ಪ್ರತಿನಿಧಿಗಳು ಹಾಗೂ ಅನಿವಾಸಿ ಉದ್ಯಮಿಗಳು ಅತಿಥಿಗಳಾಗಿ ಭಾಗಿಗಳಾಗಿದ್ದರು.

ವಿವಿಧ ಪ್ರಶಸ್ತಿ ವಿಜೇತರಿಗೆ ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರೆಲ್ಲಾ ಸೇರಿ ಪ್ರಶಸ್ತಿ ಪ್ರದಾನ ಗೈದರು. ಈ ‘ಸೋಡ್‍ಪಾಡ್’ ಸಾಂಸ್ಕೃತಿಕ ಸ್ಪರ್ಧಾ ಉತ್ಸವದ ಮೂಲಕ ತನ್ನ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ದಶ-ವಿಶೇಷ ಕಾರ್ಯಕ್ರಮಗಳನ್ನು ಅಂತ್ಯಗೊಳಿಸಿರುವ ‘ಮೊಗವೀರ್ಸ್ ಬಹ್ರೈನ್’ ಇನ್ನು ಆದಷ್ಟು ಶೀಘ್ರದಲ್ಲಿ ತನ್ನ ದಶಮಾನೋತ್ಸವದ ಸಮಾರೋಪ ಸಮಾರಂಭವನ್ನು ಜರಗಿಸುವುದಕ್ಕಾಗಿ ಸಿದ್ಧತೆಗಳನ್ನು ನಡೆಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಪ್ರಕಟಿಸಿದರು.

ಬಹ್ರೈನ್ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸೋಶಿಯಲ್ ಕ್ಲಬ್‍ನಲ್ಲಿ ಸಂಪನ್ನಗೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸುರೇಶ್ ಪೈ, ಬರ್ಟ್ರಾಮ್ ರೇಗೋ ಮತ್ತು ಟೀನಾ ಡಿ’ಸೋಜಾರವರು ಸಹಕರಿಸಿದ್ದರು.

ಈ ಕಾರ್ಯಕ್ರಮದ ಒಟ್ಟು ಸಂಯೋಜನೆಗೆ ರಾಜೇಶ್ ಮೆಂಡನ್, ಸುರೇಶ್ ಅಮೀನ್, ಪುನೀತ್ ಪುತ್ರನ್, ಚಂದ್ರ ಮೆಂಡನ್, ಪದ್ಮನಾಭ ಕಾಂಚನ್ ಮತ್ತು ಲವಣ್ ಕುಮಾರ್ ವಿಶೇಷ ಸಹಕಾರವಿತ್ತು.               

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News