×
Ad

ಕಾಬಾ : ಯಾತ್ರಿಕರಿಗೆ ಅಡ್ಡಿಯುಂಟುಮಾಡುವ ಸೆಲ್ಫಿ ಗೀಳು

Update: 2016-03-18 17:39 IST

ಮಕ್ಕಾ, ಮಾ. 18 : ಹಜ್ ಅಥವಾ ಉಮ್ರಾ ಯಾತ್ರೆಗೆ ಬರುವ ಯಾತ್ರಿಕರು ಮಕ್ಕಾದ ಮಸ್ಜಿದುಲ್ ಹರಮ್ ನಲ್ಲಿ ಅದರಲ್ಲೂ ವಿಶೇಷವಾಗಿ ಕಾಬಾ ಭವನದ ಎದುರು ಸೆಲ್ಫಿ ತೆಗೆದುಕೊಳ್ಳುವ ಗೀಳು ಇತ್ತೀಚಿಗೆ ದೊಡ್ಡ ಕಿರಿಕಿರಿಯಾಗಿ ಬೆಳೆದಿದೆ ಎಂದು ಸೌದಿ ಗ್ಯಾಜ್ಹೆಟ್ ಲೇಖನ ಪ್ರಕಟಿಸಿದೆ. ನಿಧಾನವಾಗಿ ಆರಂಭವಾದ ಈ ಅಭ್ಯಾಸ ಇತ್ತೀಚಿಗೆ ದೊಡ್ಡ ಗೀಳಾಗಿ ಪರಿವರ್ತನೆಯಾಗಿದ್ದು ಕಾಬಾ ಸುತ್ತ ಪ್ರದಕ್ಷಿಣೆ ( ತವಾಫ್ ) ಮಾಡುವವರಿಗೆ ತೀವ್ರ ಅಡಚಣೆ ಉಂಟು ಮಾಡುತ್ತಿದೆ ಎಂದು ಯಾತ್ರಿಕರನ್ನು ಉಲ್ಲೇಖ್ಸಿಸಿ ಅದು ಬರೆದಿದೆ. 

" ಹರಮ್ ನೊಳಗೆ ಫೋಟೋ ತೆಗೆಯುವುದೇ ಹಿಂದೆ ನಿಷೆಧಿತವಾಗಿತ್ತು. ಈಗಿನ ಸೆಲ್ಫಿ ಗೀಳು ನೋಡುವಾಗ ಆ ನಿಯಮವೇ ಚೆನ್ನಾಗಿತ್ತು ಎಂದು ಅನಿಸುತ್ತದೆ. ಪ್ರದಕ್ಷಿಣೆ ಮಾಡುವಾಗ ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವ ಸಮಸ್ಯೆ ಆಗ ಇಷ್ಟು ಇರಲಿಲ್ಲ " ಎಂದು ರಾಹತ್ ಸಲೀಂ ಎಂಬ ಉಮ್ರ ಯಾತ್ರಿಕ ಹೇಳಿದ್ದಾರೆ. 

" ಸೆಲ್ಫಿ ಗೀಳು ತವಾಫ್ ( ಪ್ರದಕ್ಷಿಣೆ ) ಮಾಡುವವರಿಗೆ ದೊಡ್ಡ ಅಡ್ಡಿಯಾಗುತ್ತಿದೆ. ಹಿರಿಯರು, ವೃದ್ಧರು ಮಾತ್ರವಲ್ಲ ಎಲ್ಲ ವಯೋಮಾನದವರಿಗೂ ಅದರಿಂದ ತೊಂದರೆಯಾಗುತ್ತಿದೆ  " ಎಂದು ಪಾಕಿಸ್ತಾನದಿಂದ ಬಂದ ಫಾತಿಮಾ ಶರೀಫ್ ಹೇಳಿದ್ದಾರೆ. 

" ನನ್ನ ಪ್ರಕಾರ ನೀವು ಯಾವ ಉದ್ದೇಶದಿಂದ ಬಂದಿದ್ದೀರೋ ಆ ದೊಡ್ಡ ಉದ್ದೇಶವೇ ಇದರಿಂದ ಹಾಳಾಗುತ್ತದೆ. ಈ ಸ್ಥಳದಲ್ಲಿ ನಡೆಯುವ ಆರಾಧನೆಯ ಖುಷಿ ಹಾಗು ಸಂತೃಪ್ತಿಗೆ ಅದು ಭಂಗ ತರುತ್ತದೆ  " ಎಂದು ಇನ್ನೋರ್ವ ಯಾತ್ರಿಕ ದೂರಿದ್ದಾರೆ. 

ನಾನು ಈ ಪುಣ್ಯ ಸ್ಥಳದಲ್ಲಿದ್ದೇನೆ ಎಂದು ತೋರಿಸುವ , ಖುಷಿ ವ್ಯಕ್ತಪಡಿಸುವ ವಿಧಾನವಾಗಿ ಸೆಲ್ಫಿ ಪ್ರಾರಂಭವಾಯಿತು. ಆದರೆ ನಿಧಾನವಾಗಿ ಅದು ಮಿತಿ ಮೀರಿ ಈಗ ಎಲ್ಲ ಯಾತ್ರಿಕರ ಪಾಲಿನ ಕಿರಿಕಿರಿಯಾಗಿದೆ. ಮತಾಫ್ ( ಕಾಬಾದ ಸುತ್ತಲ ಜಾಗ ) ಅಥವ ಸಯೀ  ಪ್ರದೇಶದಲ್ಲಿ ಸೆಲ್ಫಿಗಾಗಿ ಯಾತ್ರಿಕರು ಅಲ್ಲಲ್ಲಿ ನಿಲ್ಲುವುದರಿಂದ ಹಿಂದಿನಿಂದ ಬರುತ್ತಿರುವವರಿಗೆ ತಡೆಯಾಗುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು ಇದರಲ್ಲಿರುತ್ತಾರೆ. ಇನ್ನು ಸೆಲ್ಫಿ ತೆಗೆಯುವಾಗ ಅಕ್ಕಪಕ್ಕದ  ಹಲವರು ಆ ಚಿತ್ರದಲ್ಲಿ ಬರುತ್ತಾರೆ. ಅವರಿಗೆ ಹೀಗೆ ಚಿತ್ರದಲ್ಲಿ ಬರುವುದು ಇಷ್ಟವಿದೆಯೋ , ಇಲ್ಲವೋ ಎಂಬುದರ ಬಗ್ಗೆ ಸೆಲ್ಫಿಗರು ಯೋಚಿಸುವುದಿಲ್ಲ. 

ಈಗ ಸೆಲ್ಫಿಗೆ ಹರಮ್ ನಲ್ಲಿ ನಿಷೇಧವಿಲ್ಲ . ಆದರೆ ಈ ಬಗ್ಗೆ ಯಾತ್ರಿಕರು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಆ ಲೇಖನದಲ್ಲಿ ಚರ್ಚಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News