ರಾಜಿಯಿಲ್ಲದ ಮೊಬೈಲ್ ಫೋನ್ ಕ್ಷೇತ್ರದ ಸೌದೀಕರಣ
ರಿಯಾಧ್ : ಮೊಬೈಲ್ ಫೋನ್ ಕ್ಷೇತ್ರವನ್ನು ಸೌದೀಕರಿಸುವ ತನ್ನ ನಿರ್ಧಾರವನ್ನು ಪುನರುಚ್ಛರಿಸಿರುವ ಸೌದಿಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ನಿಯಮ ಉಲ್ಲಂಘಿಸುವ ಉದ್ಯಮಿಗಳು ಎರಡು ವರ್ಷ ಜೈಲು ಶಿಕ್ಷೆ, ಒಂದು ಮಿಲಿಯನ್ ಸೌದಿ ರಿಯಾಲ್ ದಂಡ ಹಾಗೂ ವಲಸಿಗರಿಗೆ ಗಡೀಪಾರು ಶಿಕ್ಷೆ ವಿಧಿಸಲಾಗುವುದೆಂದು ಎಚ್ಚರಿಸಿದೆ. ಈ ಮೊಬೈಲ್ ಫೋನ್ ಕ್ಷೇತ್ರದ ಸೌದೀಕರಣದಿಂದ ದೇಶದ ನಾಗರಿಕರಿಗೆ ಈ ಹಿಂದೆ ಕಾರ್ಮಿಕ ಸಚಿವಾಲಯವು ತಿಳಿಸಿದ ಹಾಗೆ 20,000 ಉದ್ಯೋಗಗಳು ಸೃಷ್ಟಿಯಾಗುವವು.
ಮುಂದಿನ ಮೂರು ತಿಂಗಳಲ್ಲಿ ಶೇ. 50 ಸೌದೀಕರಣ ಸಾಧಿಸಲಾಗುವುದಾದರೆ ಸೆಪ್ಟೆಂಬರ್ 2ರಂದು ಆರು ತಿಂಗಳ ಗಡು ಮುಕ್ತಾಯವಾಗುವಾಗ ಸೌದೀಕರಣದಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಲು ಸರಕಾರ ಯೋಚಿಸುತ್ತಿದೆ. ಈ ಕಾಂರ್ದಲ್ಲಿ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳು ಕೈಜೋಡಿಸಲಿವೆ. ಅರ್ಹ ಸೌದಿ ಪುರುಷರು ಹಾಗೂ ಮಹಿಳೆಯರಿಗೆಉತ್ತಮ ಉದ್ಯೋಗ ದೊರಕಿಸುವುದು ಹಾಗೂಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ಯಮಗಳಲ್ಲಿ ಯಾವುದೇ ನಿಯಮ ಉಲ್ಲಂಘನೆ ತಡೆಯುವ ಉದ್ದೇಶ ಈ ಕ್ರಮದ ಹಿಂದಿದೆ.
ವಲಸಿಗರ ಬದಲು ಯುವ ಸೌದಿಗಳು ಉತ್ತಮ ಉದ್ಯೋಗ ಪಡೆಯುವಂತಾಗಲು ಅವರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ಇತ್ತೀಚೆಗೆ ಟೆಕ್ನಿಕಲ್ ಎಂಡ್ ವೊಕೇಶನಲ್ ಟ್ರೈನಿಂಗ್ ಕಾರ್ಪೊರೇಶನ್ ಘೋಷಿಸಿದ್ದರೆಸಂಸ್ಥೆಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಫಂಡ್ ತಿಳಿಸಿದೆ.
ಈಗಾಗಲೇ 33,000 ಸೌದಿಗಳು ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಾರ್ಪೊರೇಶನ್ ಹೇಳಿದೆ.
ಸರಕಾರದ ಹೊಸನಿಯಮದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಸಂಸ್ಥೆಗಳನ್ನು ಗುರುತಿಸುವ ಸಲುವಾಗಿ ವಾಣಿಜ್ಯ ಸಚಿವಾಲಯವು ಈಗಾಗಲೇ ಸೆಲ್‌ಫೋನ್ ಸ್ಟೋರ್‌ಗಳ ತಪಾಸಣೆ ನಡೆಸಿದೆ.