ರಿಯಾದ್ : ತಾಯಿಯ ಸಮಯಪ್ರಜ್ಞೆ - ಹಂತಕಿ ಮನೆ ಗೆಲಸದಾಕೆಯಿಂದ ಬದುಕುಳಿದ ಕಂದಮ್ಮ
ರಿಯಾದ್ , ಮಾ. 24 : ಮನೆಗೆಲಸದಾಕೆಯ ಕೈಯಲ್ಲಿ ಉಸಿರುಗಟ್ಟಿ ಸಾಯುತ್ತಿದ್ದ ನಾಲ್ಕು ತಿಂಗಳ ಕಂದಮ್ಮನನ್ನು ತಾಯಿ ರಕ್ಷಿಸಿದ ಕರುಣಾಜನಕ ಘಟನೆ ಇಲ್ಲಿನ ಅಲ್ ಖರ್ಜ್ ಎಂಬಲ್ಲಿ ನಡೆದಿದೆ .
ಬಾಂಗ್ಲಾ ಮೂಲದ ಮನೆಗೆಲಸದ ಮಹಿಳೆ ಇದ್ದಕ್ಕಿದ್ದಂತೆ ಮಗುವನ್ನು ಮಲಗಿಸಿದ್ದ ಕೊನೆಗೆ ಹೋಗಿ ತನ್ನ ಒಂದು ಕೈಯನ್ನು ಅದರ ಬಾಯಿಗೆ ಇತ್ತು ಇನ್ನೊಂದು ಕೈಯಿಂದ ಅದರ ಕತ್ತು ಹಿಸುಕಿದ್ದಾಳೆ. ಆದರೆ ಅದೇನು ಪವಾಡವೋ , ಪಕ್ಕದ ಕೋಣೆಯಲ್ಲಿದ್ದ ಮಗುವಿನ ತಾಯಿಗೆ ತಕ್ಷಣ ಮಗುವಿನ ಸುರಕ್ಷತೆಯ ಬಗ್ಗೆ ಆಲೋಚನೆ ಬಂದು ತನ್ನ ದೊಡ್ಡ ಮಗಳನ್ನು ಮಗುವನ್ನು ನೋಡಿ ಬಾ ಎಂದು ಕಳಿಸಿದ್ದಾಳೆ. ಕೋಣೆಗೆ ಬಂದು ನೋಡಿದ ದೊಡ್ಡ ಮಗಳು ಆಘಾತದಿಂದ ತಾಯಿಯನ್ನು ಕೂಗಿ ಕರೆದು ಮಗುವನ್ನು ಹಂತಕಿಯಿಂದ ರಕ್ಷಿಸಿದ್ದಾಳೆ.
ತಕ್ಷಣ ಮಗುವಿನ ತಂದೆಗೆ ದೂರವಾಣಿ ಕರೆ ಮಾಡಿ ಕರೆಸಿದ್ದಾರೆ. ತಂದೆ ಬಂದು ನೋಡುವಾಗ ಪತ್ನಿ ಮಾನಸಿಕ ಆಘಾತಕ್ಕೊಳಗಾಗಿದ್ದರೆ ಮಗು ಪ್ರಜ್ಞೆ ಕಳೆದುಕೊಂಡಿತ್ತು. ಮಗುವಿನ ಮುಖ ನೀಲಿಯಾಗಿತ್ತು. ತಕ್ಷಣ ನೆರೆಹೊರೆಯವರು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಅಲ್ ಖರ್ಜ್ ನಲ್ಲಿರುವ ಕಿಂಗ್ ಖಾಲಿದ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮಗುವಿಗೆ ತುರ್ತು ಚಿಕಿತ್ಸೆ ನೀಡಿ ಬದುಕಿಸಲಾಯಿತು ಎಂದು ವರದಿಯೊಂದು ತಿಳಿಸಿದೆ.
" ಆಕೆ 12 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದಳು. ಸಂಬಳ ಹೆಚ್ಚಿಸಲು ಕೇಳಿದ್ದಕ್ಕೆ ಹೆಚ್ಚಿಸಿ ಮೊಬೈಲ್ ಒಂದನ್ನೂ ಕೊಟ್ಟಿದ್ದೆವು. ಆಕೆಯನ್ನು ನಾವು ಚೆನ್ನಾಗಿ ನೋಡಿಕೊಂಡಿದ್ದೆವು " ಎಂದು ಮಗುವಿನ ತಂದೆ ಹೇಳಿದ್ದಾರೆ.
ಆರೋಪಿ ಮನೆಗೆಲಸದಾಕೆಯನ್ನು ಬಂಧಿಸಲಾಗಿದೆ.