ಇನ್ನು ಕುವೈಟ್‌ನಾದ್ಯಂತ ಕ್ಯಾಮರಾ ಕಣ್ಣುಗಳು ನಿಗಾ ಇರಿಸಲಿವೆ!
ಕುವೈಟ್ ಸಿಟಿ, ಮಾರ್ಚ್.31; ಅಪರಾಧ ಕೃತ್ಯಗಳನ್ನು ತಡೆಯಲಿಕ್ಕಾಗಿ ಮತ್ತು ದೇಶವನ್ನು ಬಹಳ ಹೆಚ್ಚು ಸುರಕ್ಷಿತವಾಗಿರಿಸುವುದಕ್ಕಾಗಿ ಕುವೈಟ್‌ನಾದ್ಯಂತ ನಿರೀಕ್ಷಣಾ ಕ್ಯಾಮರಾಗಳನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೃಹ ಸಚಿವ ಶೈಖ್ ಮುಹಮ್ಮದ್ ಅಲ್ ಖಾಲಿದ್ ಅಸ್ಸಬಾಹ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಸಿದ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಲಿಕ್ಕಾಗಿ ಅಧೀನ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಸುಲೈಮಾನ್ ಫಹದ್ ಅಲ್ ಫಹದ್‌ರಿಗೆ ಸಚಿವರು ಹೊಣೆ ವಹಿಸಿದ್ದಾರೆಂದು ವರದಿಯಾಗಿದೆ. ಕಳೆದ ದಿವಸ ಸರಕಾರಿ ಸಂಸ್ಥೆಯೊಂದರ ಪಾರ್ಕಿಂಗ್ ಪರಿಸರದಲ್ಲಿ ನಡೆದಿದ್ದ ಆಕ್ರಮಣಕ್ಕೆ ಸಂಬಂಧಿಸಿದ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಕ್ಯಾಮರಾ ಸ್ಥಾಪಿಸುವ ಕ್ರಮವನ್ನು ಶೀಘ್ರವಾಗಿ ಪೂರ್ತಿಗೊಳಿಸಬೇಕೆಂದು ಸಚಿವರು ನಿರ್ದೇಶನ ನೀಡಿರುವುದಾಗಿ ವರದಿಗಳು ತಿಳಿಸಿವೆ. ಸರಕಾರಿ ಸಂಸ್ಥೆಗಳು, ಡಿಪಾರ್ಟ್‌ಮೆಂಟ್‌ಗಳು, ಕಚೇರಿಮುಂತಾದೆಡೆ ಒಳಗೆ ಮತ್ತು ಹೊರಗೆ ಕ್ಯಾಮರಾ ನಿರೀಕ್ಷಣೆಗೆ ಪ್ರಾಥಮಿಕ ಆದ್ಯತೆ ನೀಡಲಾಗುವುದು. ಸಚಿವ ಸಭೆ, ಪಾರ್ಲಿಮೆಂಟ್ ಅಂಗೀಕಾರವಿರುವ ಕ್ಯಾಮಾರ ಸ್ಥಾಪಿಸುವ ಯೋಜನೆಯನ್ನು ಜಾರಿಗೆ ತರಲಿಕ್ಕಾಗಿ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಿಗೆ ಮಾಡಿಕೊಳ್ಳಲಾಗಿದೆ.
ದೇಶದ ವಿವಿಧ ಕಡೆಗಳಲ್ಲಿ ವಿವಿಧ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗುವುದು. ನಾಲ್ಕುಕೋಟಿ ದೀನಾರ್ ವೆಚ್ಚದ ಈ ಯೋಜನೆ ದೇಶದಲ್ಲಿ ಅಪರಾಧಿ ಕೃತ್ಯಗಳನ್ನು ತಡೆಯಲು ಸಹಾಯಕವಾಗಲಿದೆ ಎಂದು ತಿಳಿಯಲಾಗಿದೆ. ದೇಶದಲ್ಲಿ ಅಪರಾಧಕೃತ್ಯದಲ್ಲಿ ಹೆಚ್ಚಳವಾಗುತ್ತಿದ್ದು ಹಿಂದಿಗಿಂತ ಈಗ ಭದ್ರತಾ ಬೆದರಿಕೆಗಳು ಸೃಷ್ಟಿಯಾದ ಪರಿಸ್ಥಿತಿಯಲ್ಲಿ ಈ ಯೋಜನೆಗೆ ಕುವೈಟ್ ಸರಕಾರ ಮನಸ್ಸು ಮಾಡಿದೆಯೆನ್ನಲಾಗಿದೆ.
ಸಾರ್ವಜನಿಕ ಸ್ಥಳಗಳು, ವಾಸಸ್ಥಳಗಳು, ವಾಣಿ ಕೇಂದ್ರಳ ಸಹಿತ ಹಲವು ಕಡೆಗಳಲ್ಲಿ ನಿರೀಕ್ಷಣಾ ಕ್ಯಾಮರಾ ನಿಗಾಇರಿಸಲಿದೆ. ಇದರೊಂದಿಗೆ ಜನರ ಜೀವನ ಹೆಚ್ಚು ಸುರಕ್ಷಿತವಾಗಲಿದೆ ಎಂದು ಸರಕಾರ ಲೆಕ್ಕ ಹಾಕಿದೆ. ಮೊದಲ ಹಂತದಲ್ಲಿ ಹದಿನೈದು ಪ್ರಮುಖ ಸ್ಥಳಗಳಲ್ಲಿ ಹದಿನೈದು ಕ್ಯಾಮರಾ ಅಳವಡಿಸಲಾಗುವುದು. ಆನಂತರ ಬೇರೆ ಸ್ಥಳಗಳಲ್ಲಿಯೂ ಅಳವಡಿಸುತ್ತಾ ಬರಲಾಗುವುದು ಎಂದು ವರದಿಯಾಗಿದೆ.
ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಕನಿಷ್ಠ 120 ದಿವಸಗಳವರೆಗೆ ಸುರಕ್ಷಿತವಾಗಿಡುವ ವ್ಯವಸ್ಥೆಯನ್ನು ಅದರ ಮಾಲಕರು ಮಾಡಿಟ್ಟಿರಬೇಕು. ಕ್ಯಾಮರಾ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಸರಕಾರಿ ಅಧಿಕಾರಿಗಳಿಗಲ್ಲದೆ ಬೇರಾರಿಗೂಒಪ್ಪಿಸಬಾರದು. ಇದನ್ನು ಉಲ್ಲಂಘಿಸಿದವರಿಗೆ ಮೂರುವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.
ವ್ಯಾಪಾರಿ ಸಂಸ್ಥೆಗಳಲ್ಲಿ ಅಳವಡಿಸುವ ಕ್ಯಾಮರಾ ಅದರ ಎದುರಲ್ಲಿ ಸಾಗುವವರ ಚಿತ್ರಗಳನ್ನು ಸ್ಪಷ್ಟವಾಗಿದಾಖಲಿಸುವ ವ್ಯವಸ್ಥೆ ಇರುವವುಗಳಾಗಿರಬೇಕು. ನಿರೀಕ್ಷಣಾ ಕ್ಯಾಮರಗಳಲ್ಲಿ ದಾಖಲಾದ ದೃಶ್ಯಗಳನ್ನು ಕೊಲೆಪಾತಕ, ಆಕ್ರಮಣ, ಇತ್ಯಾದಿ ಅಪರಾಧಕೃತ್ಯಗಳ ಪುರಾವೆಯಾಗಿ ಬಳಸಲಾಗುವುದು ಎಂದು ವರದಿಯಾಗಿದೆ.