ಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೌದಿಗಳಿಂದ ಭಾರೀ ಪ್ರತಿಕ್ರಿಯೆ
ರಿಯಾದ್, ಎಪ್ರಿಲ್.1: ಮೊಬೈಲ್ ಮಾರಾಟ ಮತ್ತು ರಿಪೇರಿ ಸೌದೀಕರಣ ನಡೆಸುವುದರ ಅಂಗವಾಗಿ ಸ್ವದೇಶಿ ಉದ್ಯೋಗಾಂಕ್ಷಿಗಳಿಂದ ಅವರು ಇಚ್ಛಿಸುವ ವಿಭಾಗಳಲ್ಲಿ ಕೆಲಸ ಮಾಡಲು ಸರಕಾರ ಅರ್ಜಿಆಹ್ವಾನಿಸಿದೆ. ಸೌದಿಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯೆಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ರಿಯಾದ್ ಚೇಂಬರ್ ಆಫ್ ಕಾಮರ್ಸ್ ಹಾಲ್‌ನ ರಿಕ್ರ್ಯೂಟ್‌ಮೆಂಟ್ ಕೇಂದ್ರದಲ್ಲಿ 1546 ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಂದುವರಿಯಲಿದ್ದು ಮಾನವಸಂಪನ್ಮೂಲ ಖಾತೆ ಮತ್ತು ಉದ್ಯೋಗಾಧರಿತ ತರಬೇತಿ ಕೇಂದ್ರದ ನೇತೃತ್ವದಲ್ಲಿ ಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡಲಿಚ್ಛಿಸುವ ಸ್ವದೇಶಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸೌದಿ ಯುವತಿ, ಯುವಕರನ್ನು ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಸಮರ್ಥರನ್ನಾಗಿಸುವ ಉದ್ದೇಶದಿಂದ ರಿಯಾದ್‌ನಲ್ಲಿ ಅಧಿಕಾರಿಗಳು 28 ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ನೂರಾರು ಸೌದಿಗಳಿಗೆ ಅಧಿಕಾರಿಗಳು ತರಬೇತಿ ಪಡೆಯುತ್ತಿದ್ದು ಹೆಚ್ಚಿನ ಲೆಕ್ಕದಲ್ಲಿ ಸ್ವದೇಶಿಗಳು ಇದರ ಪ್ರಯೋಜನ ಪಡೆಯಬೇಕೆಂದು ಖಾಸಗಿ ಕ್ಷೇತ್ರಗಳ ಉದ್ಯೋಗ ಖಾತೆ ವಿನಂತಿಸಿಕೊಂಡಿದೆ.
ತರಬೇತಿ ಮುಗಿಸಿದವರಿಗೆ ರಿಯಾದ್ ಚೇಂಬರ್ ಆಫ್ ಕಾಮರ್ಸ್ ಕೇಂದ್ರದಲ್ಲಿ ಸಜ್ಜುಗೊಳಿಸಿದ ರಿಕ್ರ್ಯೂಟ್ ಮೆಂಟ್ ಕೇಂದ್ರದಲ್ಲಿ ಕೆಲಸ ಸಾಧ್ಯತೆಗಳ ಕುರಿತು ವಿವರಗಳನ್ನು ಲಭ್ಯಗೊಳಿಸಲಾಗಿದೆ. ಬುಧವಾರ ಸಾವಿರಾರು ಮಂದಿ ಚೇಂಬರ್‌ಗೆ ಬಂದು ಮಾಹಿತಿಗಳನ್ನು ಪಡೆದಿದ್ದಾರೆ. ಗುರುವಾರವೂ ಹೆಚ್ಚಿನ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗಿದೆ. ಜೂನ್‌ನಿಂದ ಮೊಬೈಲ್ ಅಂಗಡಿಗಳಲ್ಲಿ ಮತ್ತು ರಿಪೇರಿ ಕೇಂದ್ರಗಳಲಿಯೂ ಶೇ.50ರಷ್ಟು ಸೌದಿಗಳಿರಬೇಕೆಂದು ಕಾರ್ಮಿಕ ಖಾತೆ ಎಚ್ಚರಿಕೆ ನೀಡಿದೆ.
ಸೆಪ್ಟಂಬರ್‌ನಲ್ಲಿ ಶುಚೀಕರಣ ಕಾರ್ಮಿಕರ ಸಹಿತ ಈ ಕ್ಷೇತ್ರದಲ್ಲಿ ಎಲ್ಲರೂ ಸೌದಿಗಳಾಗಿರಬೇಕೆಂದು ಆದೇಶ ಹೊರಡಿಸಲಾಗಿದೆ. ಸೌದೀಕರಣ ಜಾರಿಗೊಳಿಸಲಿಕ್ಕಾಗಿ ಕಾರ್ಮಿಕ ಖಾತೆ ನೇತೃತ್ವದಲ್ಲಿ ಹತ್ತು ಇಲಾಖೆಗಳ ಜಂಟಿ ವೇದಿಕೆಯನ್ನು ರೂಪೀಕರಿಸಲಾಗಿದೆ.
ಹಲವಾರು ವಿದೇಶಿಗಳು ಕೆಲಸ ಮಾಡುವ ಕ್ಷೇತ್ರ ಇದಾಗಿದ್ದು ಇಲ್ಲಿ ಶೇ.100 ಸ್ವದೇಶೀಕರಣ ಕ್ರಮ ಕಾರ್ಮಿಕ ಸಚಿವಾಲಯದ ನೇತೃತ್ವದಲ್ಲಿ ಜಾರಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.