×
Ad

ಸೌದಿ ಅರೇಬಿಯ : ಕೊನೆಕ್ಷಣದಲ್ಲಿ ಕ್ಷಮಿಸಿದ ಮೃತ ಬಾಲಕನ ತಾಯಿ ಮತ್ತು ಸಹೋದರರು

Update: 2016-04-02 13:25 IST

ಜುಬೈಲ್, ಎಪ್ರಿಲ್.2: ಕೊಲೆಪ್ರಕರಣವೊಂದರಲ್ಲಿ ವಧಿಸುವ ಶಿಕ್ಷೆ ಜಾರಿಗೊಲಿಸಲು ಕರೆತಂದ ಅಪರಾಧಿಗೆ ಕೊನೆಕ್ಷಣದಲ್ಲಿ ಮೃತನಾದ ಬಾಲಕನ ಬಂಧುಗಳು ಕ್ಷಮೆ ನೀಡಿದ ಘಟನೆ ಜುಬೈಲ್‌ನಲ್ಲಿ ಗುರವಾರ ಬೆಳಗಾತ ನಡೆದಿರುವುದಾಗಿ ವರದಿಯಾಗಿದೆ. ಕೊಲೆಪಾತಕ ಪ್ರಕರಣದಲ್ಲಿ ಒಂಬತ್ತು ವರ್ಷಗಳಿಂದ ಜೈಲಿನಲ್ಲಿದ್ದ ಸೌದಿ ಪ್ರಜೆ ಝಫರ್ ಹಮದ್ ಅಲ್ ಮಾಯಿರ್‌ಗೆ(35) ಕೊಲೆಯಾದ ಬಾಲಕನ ತಾಯಿ ಮತ್ತು ಸಹೋದರರು ಕೊನೆ ಕ್ಷಣದಲ್ಲಿ ಕ್ಷಮಿಸುವುದಾಗಿ ಹೇಳದ್ದರಿಂದ ಆತ ವಧಿಸುವುದರಿಂದ ಪಾರಾಗಿದ್ದಾನೆ. ಅಪರಾಧಿ ಝಫರ್ ಹಮದ್ ಅಲ್ ಮಾಯಿರಿ ಮತ್ತು ಇನ್ನೊಬ್ಬ ನಡುವೆ ಜಗಳ ಸಂಭವಿಸಿದಾಗ ಝಫರ್‌ನ ಕೈಯಲ್ಲಿದ್ದ ಕೋವಿಯಿಂದ ಗುಂಡು ಹಾರಿ ಹತ್ತಿರದಲ್ಲಿದ್ದ ಬಾಲಕನಿಗೆ ತಾಗಿತ್ತು. ಹನ್ನೆರಡು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಖಿಫ್ಜ ಎಂಬಲ್ಲಿ ಈ ಘಟನೆ ನಡೆದಿತ್ತು.

ಗುರುವಾರ ಶಿಕ್ಷೆ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಬೆಳಗಾತ ಜುಬೈಲ್‌ನಲ್ಲಿ ಭಾರೀ ಪೋಲೀಸ್ ರಕ್ಷಣೆಯಲ್ಲಿ ವಾಹನ ಸಂಚಾರವನ್ನು ಬೇರೆಡೆಯಿಂದ ಏರ್ಪಡಿಸಿ ಅಪರಾಧಿಗೆ ವಧಿಸುವ ಶಿಕ್ಷೆ ನೀಡುವ ಸಿದ್ಧತೆ ನಡೆಸಲಾಗಿತ್ತು. ಇದನ್ನು ನೋಡಲು ಭಾರೀ ಜನರು ಸೇರಿದ್ದರು. ಹನ್ನೊಂದು ಗಂಟೆಗೆ ಅಪರಾದಿಯನ್ನು ಕರೆದುಕೊಂಡು ಆ್ಯಂಬುಲೆನ್ಸ್ ಬಂತು. ಜಡ್ಜ್ ಆರೋಪ ಪತ್ರವನ್ನು ಓದಿದರು. ಆನಂತರ ಶಿಕ್ಷೆ ಜಾರಿಗೊಳಿಸುವ ಮೊದಲು ಅಧಿಕಾರಿಗಳು ಮೃತ ಬಾಲಕ ಸಅದ್ ಮುಹಮ್ಮದ್‌ನ ಬಂಧುಗಳೊಂದಿಗೆ ಹಲವು ಸಲ ಚರ್ಚೆ ನಡೆಸಿದರು.

ಶಿಕ್ಷೆಯ ವಿಚಾರದಲ್ಲಿ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ಕೊನೆಗೆ ಪೊಲೀಸ್ ಕ್ಯಾಪ್ಟನ್ ಮಜೀದ್ ಮತ್ತು ಬಾಲಕನ ತಾಯಿ ಮತ್ತು ನಾಲ್ವರು ಸಹೋದರರೊಂದಿಗೆ ನಡೆಸಿದ ರಾಜಿ ಮಾತುಕತೆಯಲ್ಲಿ ಅವರು ಕ್ಷಮಿಸಲು ಸಿದ್ಧರಾದರೆಂದು ವರದಿಯಾಗಿದೆ. ದೇವ ಸಂಪ್ರೀತಿ ಬಯಸಿ ರಕ್ತಪರಿಹಾರ ಪಡೆಯದೆಯೇ ತಾನು ಕ್ಷಮಿಸಿರುವುದಾಗಿ ಬಾಲಕನ ತಾಯಿ ಹೇಳಿದ್ದಾರೆಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News