ಒಮನ್: ಎರಡು ಅಪಘಾತಗಳಲ್ಲಿ ನಾಲ್ವರು ಭಾರತೀಯರ ಸಹಿತ ಎಂಟು ಸಾವು
ಮಸ್ಕತ್, ಎಪ್ರಿಲ್.3: ಒಮನ್‌ನಲ್ಲಿ ನಡೆದ ಎರಡು ಅಪಘಾತಗಳಲ್ಲಿ ನಾಲ್ವರು ಭಾರತೀಯರ ಸಹಿತ ಎಂಟು ಮಂದಿ ಮೃತರಾದ ಘಟನೆ ವರದಿಯಾಗಿದೆ. ಮಸ್ಕತ್ ಅಲ್‌ಕುವೈರಿನಲ್ಲಿ ಶನಿವಾರ ಬೆಳಗ್ಗೆ ಮತ್ತು ಆದಂ ಪ್ರಾಂತದಲ್ಲಿ ಶುಕ್ರವಾರ ಮಧ್ಯರಾತ್ರಿಯೂ ಅಪಘಾತ ಸಂಭಿವಿಸಿತ್ತು. ಪುಣೆ ನಾಸಿಕ್‌ನ ಬೈರೂಸ್ ಇರಾನಿ, ಪತ್ನಿ ಮೋನಾ ಕೊನೆಯ ಮಗ ಆರೋಣ್, ಪತ್ನಿ ತಾಯಿ ಅಲ್ ಕುವೈರಿಯಲ್ಲಾದ ಅಪಘಾತದಲ್ಲಿ ಮೃತರಾದವರು.
ಗಾಯಾಳು ದೊಡ್ಡ ಮಗನನ್ನು ಕೌಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್‌ಕೈವೆರ್ ಮಸ್ಕತ್ ಬೇಕರಿ ಸಮೀಪ ಶನಿವಾರ ಒಂದೂವರೆ ಗಂಟೆಗೆ ಅಪಘಾತ ನಡೆದಿತ್ತು. ರುಸ್ತಾಕ್ ಎಂಬಲ್ಲಿಗೆ ಪ್ರವಾಸ ಹೋಗಿದ್ದರು ಕುಟುಂಬ ಮರಳುವಾಗ ವಾಹನ ನಿಯಂತ್ರಣ ಕಳಕೊಂಡು ಸೇತುವೆಯ ಕಂಬಕ್ಕೆ ಢಿಕ್ಕಿಯಾಗಿತ್ತು ಎಂದು ವರದಿಗಳು ತಿಳಿಸಿವೆ. ಆದಂ ಪ್ರಾಂತದ ಔಫಿಯಾಹ್‌ನಲ್ಲಿ ಶುಕ್ರವಾರ ಮಧ್ಯರಾತ್ರೆ ನಡೆದಿದ್ದ ಅಪಘಾತದಲ್ಲಿ ನಾಲ್ವರು ಯುಎಇ ಪ್ರಜೆಗಳು ಮೃತರಾಗಿದ್ದಾರೆ.
ಸಲಾಲದಿಂದ ಪ್ರವಾಸಕ್ಕೆ ಹೊರಟು ಮರಳುತ್ತಿದ್ದಾಗ ಇವರ ಪ್ರಯಾಣಿಸುತ್ತಿದ್ದ ಫೋರ್‌ವ್ಹೀಲ್ ವಾಹನ ಟ್ರಕ್‌ಗೆ ಢಿಕ್ಕಿಯಾಗಿತ್ತು. ಅಫಘಾತದಲ್ಲಿ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ನಾಲ್ವರೂ ಘಟನಾ ಸ್ಥಳದಲ್ಲಿಯೇ ಮೃತರಾಗಿರುವುದಾಗಿ ರಾಯಲ್ ಒಮನ್ ಪೊಲೀಸ್ ತಿಳಿಸಿರುವುದಾಗಿ ವರದಿಯಾಗಿದೆ.