ಮೋದಿಗೆ ಸೌದಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ರಿಯಾದ್,ಎ.3: ಪ್ರಧಾನಿ ನರೇಂದ್ರ ಮೋದಿಯವರಿಗೆ ರವಿವಾರ ಸೌದಿ ಆರೇಬಿಯದ ಅತ್ಯುನ್ನತ ನಾಗರಿಕ ಗೌರವವಾದ ‘ಕಿಂಗ್ ಅಬ್ದುಲ್ ಅಝೀಝ್ ಸಾಶ್’ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಎರಡು ದಿನಗಳ ಸೌದಿ ಪ್ರವಾಸದ ಬಳಿಕ ಮೋದಿ ಇಂದು ರಾತ್ರಿ ಹೊಸದಿಲ್ಲಿಗೆ ನಿರ್ಗಮಿಸುವ ಮುನ್ನ ರಿಯಾದ್‌ನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಪ್ರಶಸ್ತಿ ಪ್ರದಾನ ಮಾಡಿದರು.
ಅಧುನಿಕ ಸೌದಿ ಆರೇಬಿಯದ ಸಂಸ್ಥಾಪಕರೆಂದು ಖ್ಯಾತರಾಗಿರುವ ಅಬ್ದುಲ್ ಅಝೀಝ್ ಅಲ್ ಸೌದ್ ಅವರ ಹೆಸರನ್ನು ಈ ಪ್ರಶಸ್ತಿಗಿಡಲಾಗಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಹಾಗೂ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನೀಡಿದ ಆಹ್ವಾನವನ್ನು ಸೌದಿ ದೊರೆ ಸ್ವೀಕರಿಸಿದರು. ಉಭಯ ದೇಶಗಳ ನಡುವೆ ಇಂದು ನಿಯೋಗ ಮಟ್ಟದ ಮಾತುಕತೆ ಕೂಡಾ ನಡೆದಿದ್ದು ವಾಣಿಜ್ಯ, ಹೂಡಿಕೆ ಹಾಗೂ ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ರಂಗಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ನಿರ್ಧರಿಸಲಾಯಿತು.