ದುಬೈ ಕಸ್ಟಂಸ್‌ಗೆ ಈಗ ಸ್ಮಾರ್ಟ್ ಕನ್ನಡಕಗಳು
ದುಬೈ, ಎ. 13: ದುಬೈ ಕಸ್ಟಂಸ್ ಇಲಾಖೆಯು ಹೊಸತನದ ‘‘ಚತುರ ವೀಕ್ಷಣಾ ಕನ್ನಡಕ’’ (ಸ್ಮಾರ್ಟ್ ಇನ್‌ಸ್ಪೆಕ್ಷನ್ ಗ್ಲಾಸಸ್)ವೊಂದನ್ನು ಹೊರತಂದಿದೆ. ಮನೆಯಲ್ಲೇ ಅಭಿವೃದ್ಧಿಪಡಿಸಲಾದ ಈ ಕನ್ನಡಕ ಈಗ ನಡೆಯುತ್ತಿರುವ ದುಬೈ ಅಂತಾರಾಷ್ಟ್ರೀಯ ಸರಕಾರಿ ಸಾಧನೆಗಳ ಪ್ರದರ್ಶನ (ಡಿಐಜಿಎಇ) 2016ರಲ್ಲಿ ಜನರನ್ನು ಭಾರೀ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸುತ್ತಿದೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಈ ಕನ್ನಡಕದ ಮೂಲಕ ಕಸ್ಟಂಸ್ ತನಿಖಾ ಠಾಣೆಗಳಲ್ಲಿ ಕಂಟೇನರ್‌ಗಳನ್ನು ಸುಲಭವಾಗಿ ಮತ್ತು ಕ್ಷಿಪ್ರವಾಗಿ ತಪಾಸಣೆ ಮಾಡಬಹುದಾಗಿದೆ ಎಂದು ದುಬೈ ಕಸ್ಟಂಸ್‌ನ ನಿರ್ದೇಶಕ ಅಹ್ಮದ್ ಮಹಬೂಬ್ ಮುಸಾಬಿ ಹೇಳುತ್ತಾರೆ.
‘‘ಕಂಟೇನರ್‌ಗಳ ಕಸ್ಟಂಸ್ ಘೋಷಣೆಯನ್ನು ಹಾಗೂ ಅದರ ಅಪಾಯ ಗ್ರಹಿಕೆ ಮತ್ತು ಎಕ್ಸ್-ರೇ ಚಿತ್ರಗಳನ್ನು ಕನ್ನಡಕ ತಕ್ಷಣ ಸಣ್ಣ ಪರದೆಯೊಂದರಲ್ಲಿ ಪ್ರದರ್ಶಿಸುತ್ತದೆ. ಹಾಗೂ ಆ ಮೂಲಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ’’ ಎಂದರು.
‘‘ಕಂಟೇನರ್‌ಗಳ ತಪಾಸಣೆ ಪ್ರಕ್ರಿಯೆಯ ಸಮಯವನ್ನು ಈ ಕನ್ನಡಕ ಗಣನೀಯವಾಗಿ ತಗ್ಗಿಸಿದೆ. ಈ ಹಿಂದೆ ಒಂದು ಕಂಟೇನರ್‌ನ ತಪಾಸಣೆಗೆ ಎರಡು ದಿನಗಳು ಬೇಕಾಗಿದ್ದರೆ, ಈಗ ಕೇವಲ ಎರಡರಿಂದ ಮೂರು ನಿಮಿಷಗಳು ಸಾಕು’’ ಎಂದು ದುಬೈ ಕಸ್ಟಂಸ್‌ನಲ್ಲಿ ತಪಾಸಣಾ ತಂಡದ ಮುಖ್ಯಸ್ಥರಾಗಿರುವ ಮುಹಮ್ಮದ್ ರಶೀದ್ ಅಲ್ ಮರಿ ಹೇಳುತ್ತಾರೆ.
ಚತುರ ವೀಕ್ಷಣಾ ಕನ್ನಡಕವು ಗೂಗಲ್ ಗ್ಲಾಸ್ ಆಗಿದ್ದು, ಅದಕ್ಕೆ ಹೊಸ ಸಾಫ್ಟ್‌ವೇರ್ ಅಪ್ಲಿಕೇಶನನ್ನು ಸೇರಿಸಲಾಗಿದೆ. ಈ ಸಾಫ್ಟ್‌ವೇರ್ ಅಪ್ಲಿಕೇಶನ್, ಕನ್ನಡಕವು ವೇಗವಾಗಿ, ಭದ್ರವಾಗಿ ಮತ್ತು ನಿಖರವಾಗಿ ಕಸ್ಟಂಸ್‌ನ ಮೂರು ವಿಭಾಗಗಳೊಂದಿಗೆ ಸಂಪರ್ಕ ಹೊಂದುವಂತೆ ಮಾಡುತ್ತದೆ.
ತಕ್ಷಣಕ್ಕೆ ದುಬೈ ಕಸ್ಟಂಸ್ ಮೂರು ಕನ್ನಡಕಗಳನ್ನು ಖರೀದಿಸಿದೆ. ಒಂದು ಕನ್ನಡಕದ ಬೆಲೆ 3,500 ದಿರ್ಹಂ, ಅಂದರೆ ಸುಮಾರು 63,500 ರೂಪಾಯಿ.
ಈ ಕನ್ನಡಕಗಳ ಬಳಕೆಯಿಂದ ದೈನಂದಿನ ಕಸ್ಟಂಸ್ ಘೋಷಣೆಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಒಂದು ದಿನದಲ್ಲಿ ಆಗುತ್ತಿದ್ದ ಸುಮಾರು 100 ಕಸ್ಟಂಸ್ ಘೋಷಣೆಗಳು ಈಗ 1,000ವನ್ನೂ ಮೀರಿವೆ.