ಈಗ ಕುವೈಟ್ ನಲ್ಲೂ ವಲಸಿಗರಿಗೆ ಬರೆ !
ಕುವೈಟ್ , ಎ.14 : ಬಹುತೇಕ ವಲಸಿಗರೇ ವಾಸಿಸುತ್ತಿರುವ ಅಪಾರ್ಟ್ಮೆಂಟ್ ಕಟ್ಟಡಗಳು ಹಾಗು ಉದ್ಯಮಗಳಿಗೆ ವಿದ್ಯುತ್ ಹಾಗು ನೀರಿನ ಬಿಲ್ ದರ ಹೆಚ್ಚಿಸಲು ರಾಷ್ಟ್ರೀಯ ಸಂಸತ್ತು ಸರಕಾರಕ್ಕೆ ಮೊದಲ ಸುತ್ತಿನಲ್ಲಿ ಅನುಮೋದನೆ ನೀಡಿದೆ. ಈ ದರ ಏರಿಕೆಯಿಂದ ಕುವೈಟ್ ಪ್ರಜೆಗಳಿಗೆ ವಿನಾಯಿತಿ ನೀಡಲಾಗಿದೆ. ಇದು ಅನ್ತಿಮಗೊಂಡರೆ ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ಕುವೈಟ್ ವಿದ್ಯುತ್ ಬಿಲ್ ದರ ಹೆಚ್ಚಿಸಿದ ದಾಖಲೆ ಸೃಷ್ಟಿಯಾಗಲಿದೆ.
ಒಟ್ಟು 31 ಸಂಸದರು ದರ ಏರಿಕೆಯ ಪರವಾಗಿ ಹಾಗು 17 ಸಂಸದರು ಇದಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರು. ಎರಡು ವಾರಗಳ ಬಳಿಕ ಎರಡನೇ ಹಾಗು ಅಂತಿಮ ಸುತ್ತಿನ ಮತದಾನ ಈ ಕುರಿತು ನಡೆಯಲಿದೆ . ಈ ಸಂದರ್ಭದಲ್ಲಿ ಮಸೂದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.
ಸ್ಮಾರ್ಟ್ ಪವರ್ ಮೀಟರ್ ಗಳ ಅಳವಡಿಕೆ ಮುಗಿಯ ಮೇಲೆಯೇ ಈ ಹೊಸ ದರ ಅನ್ವಯವಾಗಲಿದೆ ಎಂದು ಹೇಳಲಾಗಿದ್ದು ಇದಕ್ಕೆ ಒಂದು ವರ್ಷ ಕಾಲಾವಕಾಶ ಬೇಕಾಗಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ ವಿದ್ಯುತ್ ಹಾಗು ನೀರಿನ ಬಳಕೆದಾರರಲ್ಲಿ ಕುವೈಟ್ ಪ್ರಜೆಗಳು ಕ್ರಮವಾಗಿ 40 ಶೇ. ಹಾಗು 43 ಶೇ. ಇದ್ದಾರೆ. ಅದೇ ವಲಸಿಗರು ಕ್ರಮವಾಗಿ 20 ಶೇ. ಹಾಗು 22 ಶೇ. ಇದ್ದಾರೆ.
ಬಹುತೇಕ ಸಂಸದರು ಕುವೈಟ್ ಪ್ರಜೆಗಳಿಗೆ ದರ ಏರಿಕೆ ವಿರುದ್ಧ ಮಾತನಾಡಿದರೆ ಕೆಲವರು ವಲಸಿಗರಿಗೂ ವಿನಾಯಿತಿ ನೀಡಿ ಎಂದು ಹೇಳಿದರು. ಓರ್ವ ಸಂಸದ ಸಾಲೆಹ್ ಅಶೂರ್ ಎಂಬವರು " ದರ ಏರಿಕೆ ಪ್ರಜೆಗಳು ಹಾಗು ವಲಸಿಗರ ಮೇಲಿನ ಅತಿದೊಡ್ಡ ಹಲ್ಲೆಯಾಗಿದೆ " ಎಂದು ಟೀಕಿಸಿದರು.