ದಮಾಮ್ : ಸಾಮಾಜಿಕ ನ್ಯಾಯ ಸ್ಥಾಪನೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರೇರಣೆಯಾಗಲಿ - ಸೋಶಿಯಲ್ ಫೋರಮ್
ದಮಾಮ್: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯು ಸಮಾಜದಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆಗೆ ಪ್ರೇರಣೆಯಾಗಲಿ ಎಂದುಇಂಡಿಯನ್ ಸೋಶಿಯಲ್ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕೇಂದ್ರ ಸಮಿತಿಯು ಹಾರೈಸುತ್ತದೆ. ಅಂಬೇಡ್ಕರ್ ವಿಚಾರಧಾರೆ, ದೂರದೃಷ್ಠಿಯು ದೇಶದ ಅಸ್ಪೃಶ್ಯರು, ಶೂದ್ರಾದಿಶೂದ್ರರು, ಅಲೆಮಾರಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರನ್ನೊಳಗೊಂಡ ಎಲ್ಲಾ ಶೋಷಿತ ವರ್ಗಗಳನ್ನು ಕೇಂದ್ರೀಕರಿಸಿತ್ತು. ಇವೆಲ್ಲವನ್ನೂ ಒಟ್ಟಾಗಿಸಿ ಹಿಂದುಳಿದ ವರ್ಗಗಳೆಂದು ಪರಿಗಣಿಸಿದ್ದ ಅವರು, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ನಿರಂತರ ಹೋರಾಟ ಜೀವನ ನಡೆಸಿದರು. ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ದೇಶದ ಜನಸಂಖ್ಯೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅತಿ ಹೆಚ್ಚು ದಲಿತ ಶೋಷಣೆಯ, ನ್ಯಾಯ ನಿರಾಕರಣೆಯ ಪ್ರಕರಣಗಳೂ ನಿತ್ಯ ವರದಿಯಾಗುತ್ತಿವೆ.ಇದು ದಲಿತ ಸಮುದಾಯ ಮಾತ್ರವಲ್ಲದೆ, ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅಂಬೇಡ್ಕರ್ ಈ ಹಿಂದೆಯೇ ತಿಳಿಸಿರುವಂತೆ ರಾಜಕೀಯ ಅಧಿಕಾರವಿಲ್ಲದೆ ಯಾವುದೇ ಹಿಂದುಳಿದ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂಬ ಮಾತು ಈಗ ನಿಜವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಹಿಂದ ವರ್ಗಗಳು ಅಂಬೇಡ್ಕರ್ ಜಯಂತಿಯನ್ನು ಕೇವಲ ಒಂದು ದಿನದ ಸಾಂಕೇತಿಕ ಆಚರಣೆಗೆ ಸೀಮಿತಗೊಳಿಸದೆ ಸಾಮಾಜಿಕ ನ್ಯಾಯದ ಹೋರಾಟಕ್ಕೆ ವೇದಿಕೆಯಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಆಶಿಸುತ್ತದೆ.
ಪ್ರಸಕ್ತ ಭಾರತದಲ್ಲಿ ಜನಸಾಮಾನ್ಯರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಹೊರತಾಗಿ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನದ ಧ್ಯೇಯೋದ್ದೇಶ, ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಕರೆ ನೀಡುತ್ತಿದೆ.