×
Ad

ಸೌದಿ ಸಂಕಟ: ವಲಸಿಗ ಚಾಲಕರ ಬಗ್ಗೆ ಶೂರಾದಲ್ಲಿ ಚರ್ಚೆ

Update: 2016-04-15 14:41 IST

ಜಿದ್ದಾ, ಎ. 15: ವಿದೇಶಿ ಚಾಲಕರನ್ನು ನೇಮಿಸುವಲ್ಲಿ ಉಂಟಾಗುವ ಕಷ್ಟ ಮತ್ತು ಖರ್ಚನ್ನು ನಿವಾರಿಸುವ ಸಲುವಾಗಿ ಮಹಿಳೆಯರು ವಾಹನ ಚಾಲನೆ ಮಾಡಬೇಕು ಎಂಬ ಪ್ರಚಾರ ಆಂದೋಲನವೊಂದನ್ನು ಶೂರಾ ಕೌನ್ಸಿಲ್ ಸದಸ್ಯರೊಬ್ಬರು ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿದೆ.
‘‘ಇನ್ನೊಂದು ದೇಶದ ಚಾಲಕರ ನೇಮಕಾತಿಗಾಗಿ ಕಾಯುವ ಬದಲು, ಮಹಿಳೆಯರೇ ವಾಹನ ಚಾಲನೆ ಮಾಡುವ ವಾತಾವರಣವೊಂದನ್ನು ಯಾಕೆ ನಿರ್ಮಿಸಬಾರದು. ವಿದೇಶಿ ಚಾಲಕರನ್ನು ನೇಮಿಸಿದರೂ, ಅವರಿಗೆ ವಾಹನ ಚಾಲನೆ ಗೊತ್ತಿಲ್ಲ ಎಂದು ನಂತರ ತಿಳಿದು ಬರುವ ಸಾಧ್ಯತೆಗಳೂ ಇವೆ. ಅದೂ ಅಲ್ಲದೆ, ಇದಕ್ಕೆ ತಗಲುವ ವೆಚ್ಚವೂ ಅಪಾರವಾಗಿದೆ’’ ಎಂದು ಸುಲ್ತಾನ್ ಅಲ್-ಸುಲ್ತಾನ್ ಹೇಳಿದರು.

ಚಾಲಕರ ನೇಮಕದ ಬಗ್ಗೆ ಚಾಡ್ ದೇಶದೊಂದಿಗೆ ಮಾಡಿಕೊಳ್ಳುವ ಒಪ್ಪಂದಕ್ಕೆ ಸಂಬಂಧಿಸಿ ಕಾರ್ಮಿಕ ಸಚಿವಾಲಯ ಸಿದ್ಧಪಡಿಸಿದ ಕರಡಿನ ಬಗ್ಗೆ ನಡೆದ ಚರ್ಚೆಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಪ್ರಚಲಿತ ವ್ಯವಸ್ಥೆಯಲ್ಲಿ, ಓರ್ವ ಮಹಿಳೆಯ ಜೊತೆ ಮಹ್ರಮ್ (ಆಕೆಯ ಹತ್ತಿರದ ಸಂಬಂಧಿಕರು) ಇದ್ದರೆ ಮಾತ್ರ ಆಕೆಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಲಾಗುತ್ತಿದೆ. ಆದರೆ, ಇದು ಸರಿಯೆಂದು ನನಗನಿಸುವುದಿಲ್ಲ. ಹಾಗಾದರೆ, ವಿದೇಶಿ ಚಾಲಕರ ಜೊತೆಯಲ್ಲಿ ನಾವು ಮಹಿಳೆಯರನ್ನು ಕೆಲಸಕ್ಕೆ ಹೋಗಲು ಅಥವಾ ಕೆಲಸದ ನಿಮಿತ್ತ ಎಲ್ಲಿಗಾದರೂ ಹೋಗಲು ಬಿಡುವುದಿಲ್ಲವೆ?’’ ಎಂದು ಅವರು ಪ್ರಶ್ನಿಸಿದರು.
ಅದೇ ವೇಳೆ, ಸೌದಿಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿರುವ ನಿರ್ದಿಷ್ಟ ರಾಷ್ಟ್ರೀಯರ ದೇಶಗಳ ಜನರ ನೇಮಕಾತಿಯನ್ನು ಯಾಕೆ ನಿಲ್ಲಿಸಲಾಗಿದೆ ಎಂಬುದನ್ನೂ ಅವರು ಪ್ರಶ್ನಿಸಿದರು.

ಯಾವ ದೇಶದವರು ನೇಮಕಾತಿಗೆ ಅರ್ಹರು ಎಂಬುದನ್ನು ರಾಷ್ಟ್ರೀಯ ನೇಮಕಾತಿ ಸಮಿತಿ ನಿರ್ಧರಿಸುತ್ತದೆ ಎಂದು ಹೇಳಿದ ಅವರು, ಇದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.
ನಿರ್ದಿಷ್ಟ ಆಫ್ರಿಕದ ದೇಶವೊಂದರ ಜನರನ್ನು ನೇಮಕಾತಿ ಮಾಡುತ್ತಿರುವ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಅವರ ಆಕ್ಷೇಪಕ್ಕೆ ಕೌನ್ಸಿಲ್‌ನ ಇತರ ಸದಸ್ಯರೂ ದನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News