ಜುಬೈಲ್ ಅಗ್ನಿ ದುರಂತ: ಮಡಿದ ದ.ಕ. ಜಿಲ್ಲೆಯ ನಾಲ್ವರ ಗುರುತು ಪತ್ತೆ
ಸೌದಿ ಅರಬಿಯಾ, ಎ.17: ಸೌದಿ ಅರಬಿಯಾದ ಜುಬೈಲ್‌ನ ಕಾರ್ಖಾನೆಯೊಂದರಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭಾರೀ ಬೆಂಕಿ ಅವಘಡವೊಂದರಲ್ಲಿ ಐವರು ಕನ್ನಡಿಗರ ಸಹಿತ ಒಟ್ಟು 12 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಪೈಕಿ ದ.ಕ. ಜಿಲ್ಲೆಯ ನಾಲ್ವರನ್ನು ಗುರುತಿಸಿರುವುದಾಗಿ ಹೇಳಲಾಗಿದೆ.
ಇಲ್ಲಿನ ಯುನೈಟೆಡ್ ಪ್ಲಾಂಟ್ ಎಂಬ ಕಾರ್ಖಾನೆಯಲ್ಲಿ ಸ್ಥಳೀಯ ಕಾಲಮಾನ ನಿನ್ನೆ ಪೂರ್ವಾಹ್ನ 11:30ರ ಸುಮಾರಿಗೆ ಈ ಅಗ್ನಿ ದುರಂತ ಸಂಭವಿಸಿತ್ತು.
ಮೃತಪಟ್ಟವರ ವಿವರ:
ಅವಘಡದಲ್ಲಿ ದ.ಕ. ಜಿಲ್ಲೆಯವರಾದ ಬಜ್ಪೆಯ ಭಾಸ್ಕರ ಪೂಜಾರಿ ಕೊಂಚಾರ್, ನೀರುಮಾರ್ಗ ನಿವಾಸಿ ಲಾರೆನ್ಸ್ ವಿನ್ಸೆಂಟ್ ಮೊಂತೇರೊ, ಹಳೆಯಂಗಡಿ ನಿವಾಸಿ ಅಶ್ರಫ್ ಹಾಗೂ ವಾಮಂಜೂರಿನ ಬಾಲಕೃಷ್ಣ ಪೂಜಾರಿ ಎಂಬವರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ ಭಾರತೀಯರಾದ ಡ್ಯಾನಿಯಲ್ (ಕೇರಳ), ಲಿಜೋನ್(ಕೇರಳ), ಮುಹಮ್ಮದ್ ಇಬ್ರಾಹೀಂ, ಕಾರ್ತಿಕ್ ಸನಿಲ್ ಕೃಷ್ಣಪ್ಪ, ಆಶಿಶ್ ಕುಮಾರ್ ಸಿಂಗ್ ಎಂಬವರು ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಇವರು ಮೂಲತಃ ಎಲ್ಲಿಯವರು ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಇನ್ನೊಬ್ಬರು ಜೋಲಾನ್ ನೋಲಾಸ್ಕೊ ಎಂಬವರು ದುರಂತಕ್ಕೆ ಬಲಿಯಾಗಿದ್ದು, ಇವರು ಕೂಡಾ ಎಲ್ಲಿಯವರೆಂದು ತಿಳಿದುಬಂದಿಲ್ಲ.
ಗಾಯಾಳುಗಳು:
ಕಾವೂರು ನಿವಾಸಿ ಸಯೀದ್, ಮಂಜೇಶ್ವರ ನಿವಾಸಿ ಧೀರಜ್ ಉಮೇಶ್ ಬೆಳ್ಚಡ, ಉತ್ತರ ಪ್ರದೇಶದ ಅತೀಕ್, ನೇಪಾಳದ ಅಮ್ರಿತ್, ರಯಾನ್ ಫಿಲಿಪಿನೋ ಎಂಬವರು ಗಂಭೀರ ಗಾಯಗೊಂಡಿದ್ದು, ಇಲ್ಲಿನ ವಿವಿಧ ಆಸ್ಪತ್ರೆಗಳ ತೀವ್ರಾ ನಿಗಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೇತರಿಕೆ:
ಸಣ್ಣಪುಟ್ಟ ಗಾಯಗೊಂಡಿದ್ದ ಅಯ್ಯೂಬ್ ಅಹ್ಮದ್ ಫರಂಗಿಪೇಟೆ, ನಿತಿನ್ ಕುಮಾರ್ ವೇಣೂರು, ಯತೀಶ್ ಸೈಮನ್ ಡಿಸೋಜ ಉಳ್ಳಾಲ, ಅಭಿಲಾಷ್ ನಿಡ್ಡೋಡಿ ಎಂಬವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.