ಸೌದಿ ಪ್ರಜೆಯನ್ನು ರಕ್ಷಿಸಿದ ವಲಸಿಗನಿಗೆ ಯುವರಾಜನಿಂದ ನಗದು ಬಹುಮಾನ
Update: 2016-04-17 15:47 IST
ರಿಯಾದ್, ಎ. 17: ಅಸಿರ್ ವಲಯದ ಕಣಿವೆಯೊಂದರಲ್ಲಿ ಮುಳುಗುತ್ತಿದ್ದ ಸೌದಿ ಅರೇಬಿಯದ ನಾಗರಿಕನೋರ್ವನನ್ನು ರಕ್ಷಿಸಿದ ಪಾಕಿಸ್ತಾನಿ ಪ್ರಜೆಯೊಬ್ಬನಿಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ನೈಫ್ ನಗದು ಬಹುಮಾನ ಘೋಷಿಸಿದ್ದಾರೆ.
ಅಸಿರ್‌ನಲ್ಲಿರುವ ಟತ್ಲೀತ್ ಕಣಿವೆಯಲ್ಲಿ ಮುಳುಗುವ ಅಪಾಯದಲ್ಲಿದ್ದ ಫಾಹದ್ ಅಲ್-ಖಹ್ತಾನಿ ಎಂಬವರನ್ನು ಶೌಕತ್ ಅಮಿನ್ ನೋಡಿದರು. ಸೌದಿ ಅರೇಬಿಯದ ನೈರುತ್ಯ ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ತಲೆದೋರಿದ ಪ್ರವಾಹದಲ್ಲಿ ಅಲ್-ಖಹ್ತಾನಿಯ ವಾಹನ ಮುಳುಗುತ್ತಿತ್ತು.
ಅಲ್-ಖಹ್ತಾನಿ ತನ್ನ ವಾಹನದ ತುದಿಯಲ್ಲಿ ನಿಂತು ಸಹಾಯಕ್ಕಾಗಿ ಕೂಗುತ್ತಿದ್ದರು. ಅಮಿನ್ ತೋರಿಸಿದ ಸಾಹಸದಿಂದಾಗಿ ಅಲ್-ಖಹ್ತಾನಿ ಬದುಕುಳಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಲಯದ ನಾಗರಿಕ ರಕ್ಷಣಾ ಅಧಿಕಾರಿಗಳು ಅಮಿನ್‌ರ ಸಾಹಸವನ್ನು ಕೊಂಡಾಡಿದ್ದಾರೆ. ನಗದು ಬಹುಮಾನದ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.