×
Ad

ಸೇಲ್ಸ್ ಕ್ಷೇತ್ರದಲ್ಲಿ 10,000 ಸೌದಿ ಯುವಜನತೆಗೆ ಉದ್ಯೋಗ ಕಲ್ಪಿಸಲು ಯೋಜನೆ

Update: 2016-04-23 16:15 IST

ಜಿದ್ದಾ, ಎ. 23: ಹತ್ತು ಸಾವಿರ ಯುವ ಸೌದಿಗಳಿಗೆ ತರಬೇತಿ ಕೊಟ್ಟು ಸೇಲ್ಸ್ ಹುದ್ದೆಗಳಿಗೆ ನೇಮಕ ಮಾಡಲು ಉದ್ಯಮಶೀಲತಾ ವೇದಿಕೆ ಮತ್ತು ಪ್ರದರ್ಶನ ಸಂಸ್ಥೆ ಯೋಜನೆಯೊಂದನ್ನು ಆರಂಭಿಸಿದೆ.

ಯೋಜನೆಯನ್ನು ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಜಿದ್ದಾ ಸೆಂಟರ್ ಫಾರ್ ಫೋರಮ್ಸ್ ಆ್ಯಂಡ್ ಈವಂಟ್ಸ್‌ನಲ್ಲಿ ಇತ್ತೀಚೆಗೆ ಉದ್ಘಾಟಿಸಿದರು.

ವೇದಿಕೆಯು ‘ದ ನೇಶನ್ಸ್ ಎನರ್ಜಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಯುವ ಪುರುಷರು ಮತ್ತು ಮಹಿಳೆಯರಿಗೆ ಸಣ್ಣ ಮತ್ತು ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಲು ಹತ್ತಾರು ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ.

ಪ್ರದರ್ಶನ ಮಳಿಗೆಯಲ್ಲಿ ಸುತ್ತಾಡಿದ ರಾಜಕುಮಾರ ಖಾಲಿದ್, ಉದ್ಯಮಿಗಳು ತೆರೆದಿಟ್ಟ ಉತ್ಪನ್ನಗಳನ್ನು ಶ್ಲಾಘಿಸಿದರು. ಇಲ್ಲಿ ಸೌದಿ, ಯುಎಇ ಮತ್ತು ಕುವೈತ್‌ನ ಉದ್ಯಮಿಗಳ 200ಕ್ಕೂ ಅಧಿಕ ಮಳಿಗೆಗಳಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿದ್ದಾ ವಾಣಿಜ್ಯ ಮತ್ತು ಉದ್ಯಮ ಸಂಸ್ಥೆ (ಜೆಸಿಸಿಐ)ಯ ಉಪಾಧ್ಯಕ್ಷ ಝಾಯಿದ್ ಬಿನ್ ಬಸ್ಸಂ ಅಲ್-ಬಸ್ಸಂ, ಇಂಥ ಉಪಕ್ರಮವೊಂದನ್ನು ತೆಗೆದುಕೊಳ್ಳುವ ಮೂಲಕ 10,000ಕ್ಕೂ ಅಧಿಕ ಯುವ ಸೌದಿಗಳಿಗೆ ವಲಯದ ಮಾರಾಟ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಜೆಸಿಸಿಐ ಸಹಾಯ ಮಾಡುತ್ತದೆ ಎಂದು ಹೇಳಿದರು.

ಮಕ್ಕಾ ಗವರ್ನರ್ ಕಚೇರಿ ಮತ್ತು ಅಭಿವೃದ್ಧಿ ಏಕತಾ ಕೆಂದ್ರದ ಕೃಪೆಯಿಂದ, ತಮ್ಮದೇ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಈ ಯೋಜನೆಯು ಯುವ ಜನರಿಗೆ ನೀಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News