ಜಿದ್ದಾ: ಸಂಬಳ ಸಿಗದಿದ್ದಕ್ಕೆ ಕಾರ್ಮಿಕರ ಗದ್ದಲ
ಜಿದ್ದಾ, ಎಪ್ರಿಲ್ 28: ಸಂಬಳ ತಡವಾದದ್ದರಿಂದ ಪ್ರಮುಖ ಕಾಂಟ್ರಾಕ್ಟಿಂಗ್ ಕಂಪೆನಿ ಕಚೇರಿ ಮುಂದೆ ಗುಂಪು ಸೇರಿದ ಕಾರ್ಮಿಕರಲ್ಲಿ ವಾಹನ ಢಿಕ್ಕಿಯಾಗಿ ಒಬ್ಬ ಮೃತನಾಗಿದ್ದು ಐವರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿಗಂಭೀರವಾಗಿದೆ ಎಂದು ವರದಿಯಾಗಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಕಿಂಗ್ ಅಬ್ದುಲ್ ಅಝೀರ್ ವಿಮಾನ ನಿಲ್ದಾಣದ ಯೋಜನೆ ಪರಿಸರದಲ್ಲಿ ಕಳೆದ ದಿವಸ ಈ ಘಟನೆ ನಡೆದಿದ್ದು ಕಂಪೆನಿ ಕಚೇರಿ ಮುಂದೆ ಕಾರ್ಮಿಕರು ಗುಂಪುಗೂಡಿ ದಾಂಧಲೆಗಿಳಿದಾಗ ಕಾರಿನಲ್ಲಿ ಪರಾರಿಯಾಗಲುಪ್ರಯತ್ನಿಸಿದ ಮ್ಯಾನೇಜರ್‌ನ ವಾಹನ ಢಿಕ್ಕಿಯಿಂದಾಗಿ ಓರ್ವ ಮೃತನಾದ ಮತ್ತು ಮಿಕ್ಕುಳಿದವರು ಗಾಯಗೊಂಡಿದ್ದರು. ಕಾರಿಗೆ ಮುತ್ತಿಗೆ ಹಾಕಿದ ಕಾರ್ಮಿಕರನ್ನು ನಿರ್ಲಕ್ಷಿಸಿ ಮ್ಯಾನೇಜರ್ ಕಾರು ಮುಂದಕ್ಕೊಯ್ಯಲು ಶ್ರಮಿಸಿದ್ದರಿಂದ ಅವಘಡ ಸಂಭವಿಸಿತೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡಿರುವ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಚೇರಿಯ ಮುಂದೆ ಗುಂಪುಗೂಡಿದ ಕಾರ್ಮಿಕರು ಸಂಬಳ ತಡಮಾಡಿದ್ದರಿಂದ ಆಕ್ರೋಶಗೊಂಡು ವಾಹನಗಳಿಗೆ ಹಾನಿಎಸಗಿದ್ದಲ್ಲದೆ ಪೀಠೋಪಕರಣಗಳನ್ನು ಪುಡಿಗುಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಕ್ರಮವೆಸಗಿದ ಕಾರ್ಮಿಕರನ್ನು ಮತ್ತು ಪಾರಾಗಲುಶ್ರಮಿಸಿದವರನ್ನೂ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿವಿಲ್ ಎವಿಯೇಶನ್ ವಕ್ತಾರ ಅಬ್ದುಲ್ಲ ಖುರೈಫ್ ಹೇಳಿದ್ದಾರೆ.
ವೇತನ ಸುರಕ್ಷಾ ಯೋಜನೆ ಜಾರಿಗೆ ತರದ ಕಾಂಟ್ರಾಕ್ಟಿಂಗ್ ಕಂಪೆನಿಯ ಎಲ್ಲ ಸೇವೆಗಳನ್ನು ಕಾರ್ಮಿಕ ಸಚಿವಾಲಯ ರದ್ದು ಪಡಿಸಿದೆ.
ಕೆಲವು ತಿಂಗಳ ಮೊದಲು ಸಂಬಳ ಸಿಗದಿದ್ದಕ್ಕಾಗಿ 1150 ಮಂದಿ ಕಾರ್ಮಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಕೆಲಸ ಮಾಡಿಸುತ್ತಿರುವ ಪ್ರಮುಖ ಕಂಪೆನಿಯ ಅಧೀನ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ನಾಲ್ಕು ತಿಂಗಳಿಂದ ಇವರಿಗೆ ಸಂಬಳ ನೀಡಿಲ್ಲವೆಂದು ಆರೋಪಿಸಲಾಗಿದೆ. ಕಾರ್ಮಿಕರ ಸಂಬಳ ಸಂಪೂರ್ಣ ಸೌಲಭ್ಯ ಕೂಡಲೇ ನೀಡಿ ಒಪ್ಪಂದ ಕೊನೆಗೊಳಿಸಿ ಊರಿಗೆ ಕಳುಹಿಸಲು ಹೇಳಿರುವುದಾಗಿ ಮಕ್ಕಾದ ಕಾರ್ಮಿಕ ಕಚೇರಿ ಮಾಧ್ಯಮ ಕೇಂದ್ರ ವಕ್ತಾರ ಅಹ್ಮದ್ ಅಲ್‌ಗಾಮಿದಿ ತಿಳಿಸಿದ್ದಾರೆ. ಸಂಬಳ ಸೌಲಭ್ಯ ನೀಡುವುದು, ಊರಿಗೆ ಮರಳಿ ಕಳುಹಿಸುವುದು, ಸೌಲಭ್ಯನೀಡಿ ಸ್ಪೋನ್ಸರ್ ಬದಲಿಸಲು ಅನುಮತಿ ನೀಡಬೇಕೆಂದು ಕಾರ್ಮಿಕರು ದೂರಿನಲ್ಲಿ ತಿಳಿಸಿದ್ದರು.
ಸಂಬಳ ತಡವಾದ್ದದ್ದರಿಂದ ಕಂಪೆನಿ ಕಚೇರಿ ಮುಂದೆ ಕಾರ್ಮಿಕರು ಗುಂಪುಗೂಡಿ ಬೊಬ್ಬೆ ಹೊಡೆದು ಕಂಪೆನಿ ಸಾಮಗ್ರಿಗಳನ್ನು ನಾಶಪಡಿಸಿದವರನ್ನು ಕಾರ್ಮಿಕ ಇಲಾಖೆಯ ವಿಶೇಷ ಸಮಿತಿಯ ಮುಂದೆ ಹಾಜರು ಪಡಿಸಲಾಗುವದು. ಕಂಪೆನಿಗೆ ದಂಡ ಹಾಗೂ ಇತರ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.