ವಲಸಿಗರ ವೃಷಣಕ್ಕೇ ಕುತ್ತು ತಂದ ವೈದ್ಯ!

Update: 2016-05-01 16:10 GMT

ಶಾರ್ಜಾ: ಪ್ರಮಾದವಶಾತ್ ರಕ್ತನಾಳವನ್ನು ಕತ್ತರಿಸಿ ಕೊನೆಗೆ ವೃಷಣಕ್ಕೇ ಕತ್ತರಿ ಹಾಕಿದ ವೈದ್ಯ ಮಹಾಶಯರೊಬ್ಬರಿಗೆ ಶಾರ್ಜಾ ಕೋರ್ಟ್ ಐದು ಲಕ್ಷ ದಿರ್ಹಂ ದಂಡ ವಿಧಿಸಿದೆ.
ಸಂತ್ರಸ್ತ ಜೋರ್ಡಾನ್ ಪ್ರಜೆ 50 ಲಕ್ಷ ದಿರ್ಹಂ ಪರಿಹಾರಕ್ಕೆ ಆಗ್ರಹಿಸಿ ಮೇಲ್ಮನವಿ ಸಲ್ಲಿಸಿದ್ದಾನೆ.
ಹರ್ನಿಯಾ ರೋಗದಿಂದ ಬಳಲುತ್ತಿದ್ದ ರೋಗಿ ದುಬೈ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಮೊದಲು ನೆಗೆಟಿವ್ ಫಲಿತಾಂಶ ಬಂತು. ಆದರೆ 2012ರ ಜುಲೈನಲ್ಲಿ ಶಾರ್ಜಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅಲ್ಲಿನ ವೈದ್ಯ ಆತನ ವೃಷಣದ ರಕ್ತನಾಳವನ್ನು ರೋಗಿಯ ಒಪ್ಪಿಗೆ ಇಲ್ಲದೇ ಕತ್ತರಿಸಿದ.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರೋಗಿ ಕೆಲಸ ಅಥವಾ ನಿದ್ರೆಯೂ ಮಾಡಲಾಗದೇ ಅಸಾಧ್ಯ ನೋವಿನಿಂದ ಬಳಲುತ್ತಿದ್ದ. ಮತ್ತೆ ವೈದ್ಯರ ಬಳಿಗೆ ತೆರಳಿದಾಗ ಎಡ ವೃಷಣಕ್ಕೆ ಹಾನಿಯಾಗಿರುವುದನ್ನು ಪತ್ತೆ ಮಾಡಿದರು. ಆ ಭಾಗಕ್ಕೆ ರಕ್ತ ಪರಿಚಲನೆ ನಿಂತಿರುವುದನ್ನು ಗಮನಕ್ಕೆ ತಂದರು. ಹಲವಾರು ತಪಾಸಣೆಗಳನ್ನು ನಡೆಸಿದ ಬಳಿಕ ಅಂತಿಮವಾಗಿ ಆತನ ಎಡ ವೃಷಣವನ್ನು ತೆಗೆಯಬೇಕಾಯಿತು.
ಶಸ್ತ್ರಚಿಕಿತ್ಸೆ ಬಳಿಕ ನೋವು ಕಡಿಮೆಯಾಗ ತೊಡಗಿತು. ಆದರೆ ವೃಷಣ ತೆಗೆದ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ ಆತ, ದುಬಾರಿ ಚಿಕಿತ್ಸೆಗಾಗಿಯೂ ಅಪಾರ ವೆಚ್ಚ ಮಾಡಿದ್ದ. ಬಳಿಕ ಶಾರ್ಜಾ ಕೋರ್ಟ್‌ನ ಮೊರೆ ಹೋಗಿದ್ದ. ಇದನ್ನು ವೈದ್ಯಕೀಯ ತಜ್ಞರ ತಂಡದ ಪರಾಮರ್ಶೆಗೆ ಒಳಪಡಿಸಿದ ಕೋರ್ಟ್ ಅಂತಿಮವಾಗಿ ವೈದ್ಯರ ಲೋಪವನ್ನು ಎತ್ತಿ ಹಿಡಿದು ಪರಿಹಾರಕ್ಕೆ ಆದೇಶಿಸಿದೆ. ರೋಗಿಗೆ ಲೈಂಗಿಕ ಸುಖ ಪಡೆಯುವ ಸಾಮರ್ಥ್ಯವನ್ನು ತೆಗೆದು ಹಾಕಿರುವುದನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News