×
Ad

ಮಸ್ಕತ್: ಮಂಜೇಶ್ವರ ನಿವಾಸಿ ಶವವಾಗಿ ಪತ್ತೆ

Update: 2016-05-07 23:30 IST

ಮಸ್ಕತ್, ಮೇ 7: ಇಲ್ಲಿನ ನಿಝ್ವದಲ್ಲಿ ಲಾಂಡ್ರಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಸರಗೋಡು ಜಿಲ್ಲೆಯ ವರ್ಕಾಡಿಯ ಯುವಕನೊಬ್ಬನ ಮೃತದೇಹವು ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಟೈಮ್ಸ್ ಆಫ್ ಓಮನ್ ವರದಿ ಮಾಡಿದೆ.

ಮಂಜೇಶ್ವರ ವರ್ಕಾಡಿ ಸಮೀಪದ ಬೇಕರಿಯ ಲಕ್ಷಂವೀಡು ನಿವಾಸಿ ನಾರಾಯಣ ಭಂಡಾರಿ ಎಂಬವರ ಪುತ್ರ ಹರೀಶ್ ಭಂಡಾರಿ ಮೃತಪಟ್ಟವರಾಗಿದ್ದಾರೆ. ಇವರು ಅಲ್ ನಬಾ ಕಂಪೆನಿಯ ಮೂಲಕ ಒಮನ್ ಏರ್‌ನಲ್ಲಿ ಲಾಂಡ್ರಿ ಸರ್ವಿಸ್ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶನಿವಾರ ಬೆಳಗ್ಗೆ ಹರೀಶ್ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸೆಕ್ಯುರಿಟಿ ಸಿಬ್ಬಂದಿಯನ್ನು ಅವರ ರೂಮ್‌ಗೆ ಕಳುಹಿಸಲಾಗಿತ್ತು. ಆದರೆ ರೂಮ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ನಕಲಿ ಕೀಯನ್ನು ಬಳಸಿ ಬಾಗಿಲು ತೆಗೆದಾಗ ಹರೀಶ್ ಮೃತದೇಹ ಫ್ಯಾನ್‌ನಲ್ಲಿ ನೇತಾಡುತ್ತಿತ್ತು. ಈ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಕಂಪೆನಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಳೆದ ಎಂಟೂವರೆ ವರ್ಷಗಳಿಂದ ಲಾಂಡ್ರಿ ಸರ್ವಿಸ್ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಊರಿಗೆ ಬಂದಿದ್ದವರು ಕಳೆದ ಶನಿವಾರವಷ್ಟೇ ವಾಪಸ್ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹರೀಶ್ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಅವರ ಸ್ನೇಹಿತರೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News