ಸ್ಪಾನ್ಸರ್‌ಗಳ ತಂತ್ರಕ್ಕೆ ಕಂಗಾಲಾದ ವಲಸಿಗರು
ರಿಯಾದ್, ಮೇ 19: ವಲಸಿಗರನ್ನು ರಕ್ಷಿಸುವ ಉದ್ದೇಶದೊಂದಿಗೆ ಸೌದಿ ಅರೇಬಿಯ ಸರಕಾರವು ಹಲವಾರು ನಿಯಮಾವಳಿಗಳನ್ನು ಜಾರಿಗೆ ತಂದಿದ್ದರೂ, ಹೆಚ್ಚಿನ ವಲಸಿಗರು ತಮ್ಮ ಸೌದಿ ಪ್ರಾಯೋಜಕರು ಮತ್ತು ಉದ್ಯೋಗದಾತರಿಂದ ವಂಚನೆಗೊಳಗಾಗುವುದು ಮುಂದುವರಿದಿದೆ.
ಈಜಿಪ್ಟ್ ಪ್ರಜೆ ಅಹ್ಮದ್ ಮಹ್ಸೂಬ್ ಸೌದಿ ಅರೇಬಿಯದಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹೊಸ ಕಾರೊಂದನ್ನು ಖರೀದಿಸುವುದಕ್ಕಾಗಿ ತನಗೆ ಸಂಬಳ ಪ್ರಮಾಣಪತ್ರ ನೀಡುವಂತೆ ತನ್ನ ಪ್ರಾಯೋಜಕ ಶಿಕ್ಷಣ ಸಂಸ್ಥೆಯನ್ನು ಕೇಳಿದಾಗ ಅವರ ಕಷ್ಟ ಆರಂಭವಾಯಿತು. ಅವರು ಸಣ್ಣ ಕಾರೊಂದನ್ನು ಖರೀದಿಸಿದ ಕೂಡಲೇ, ಅದನ್ನು ತನ್ನ ವಿದ್ಯಾರ್ಥಿಗಳ ಸಾಗಾಟಕ್ಕಾಗಿ ಬಳಸುವಂತೆ ಅವರು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆ ಸೂಚಿಸಿತು. ಆದರೆ, ಮಹ್ಸೂಬ್ ಅದನ್ನು ನಿರಾಕರಿಸಿದರು. ಯಾಕೆಂದರೆ, ಅವರು ಕಾರು ಖರೀದಿಸಿದ್ದು ತನ್ನ ಸ್ವಂತ ಕುಟುಂಬದ ಉಪಯೋಗಕ್ಕಾಗಿಯೇ ಹೊರತು ಕೆಲಸಕ್ಕಲ್ಲ.
ಅವರು ತನ್ನನ್ನು ಕೆಲಸದಿಂದ ಅಮಾನತುಗೊಳಿಸಿದರು ಹಾಗೂ ತನ್ನ ಕಾರನ್ನು ಅವರಿಗೆ ನೀಡುವವರೆಗೆ ಸಂಬಳವನ್ನೂ ಸ್ಥಗಿತಗೊಳಿಸಿದರು. ಈ ಬಗ್ಗೆ ಕಾರ್ಮಿಕ ಕಚೇರಿಗೆ ದೂರು ನೀಡುವಂತೆ ಅವರ ಸ್ನೇಹಿತರೊಬ್ಬರು ಸಲಹೆ ನೀಡಿದರು.
ಆದರೆ, ಅವರಿಗೆ ಅಲ್ಲೂ ಆಘಾತ ಕಾದಿತ್ತು. ನೀವು ಕೆಲವು ಉದ್ಯೋಗಿಗಳನ್ನು ಅವಮಾನಿಸಿರುವುದರಿಂದ ನಿಮ್ಮನ್ನು ಗಡಿಪಾರು ಮಾಡಲಾಗುವುದು ಎಂದು ಕಾರ್ಮಿಕ ಕಚೇರಿಯ ಕೆಲವು ಸಿಬ್ಬಂದಿ ಬೆದರಿಸಿದರು. ತನ್ನ ಪ್ರಸಕ್ತ ಉದ್ಯೋಗದಾತರು ಮೂಲ ಪ್ರಾಯೋಜಕರಲ್ಲ ಎಂಬುದನ್ನು ಅರಿತುಕೊಂಡ ಮಹ್ಸೂಬ್, ಅವರ ಬೇಡಿಕೆಗಳಿಗೆ ತಾನು ಒಪ್ಪದಿದ್ದರೆ ತನ್ನನ್ನು ಅವರು ಹೇಗೆ ಗಡಿಪಾರುಗೊಳಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಟ್ಯಾಕ್ಸಿ ಚಾಲಕ ಅಹ್ಮದ್ ಎಂ. ಎಂಬವರ ಕತೆಯೂ ಇದಕ್ಕಿಂತ ಭಿನ್ನವಲ್ಲ. ವಿಮಾನ ನಿಲ್ದಾಣದಿಂದ ಯಾವುದೋ ಲಗೇಜ್ ತರುವಂತೆ ತನ್ನ ಪ್ರಾಯೋಜಕರು ತನಗೆ ಸೂಚಿಸಿದರು ಎಂದು ಅವರು ಹೇಳುತ್ತಾರೆ. ಆದರೆ, ಲಗೇಜ್ ಹೊಂದಿದ್ದ ವಿಮಾನ ಬರುವಾರ ವಿಳಂಬವಾಗಿತ್ತು. ವಿಳಂಬದಿಂದ ಕೋಪಗೊಂಡ ಅವರ ಪ್ರಾಯೋಜಕರು, ಚಾಲಕನ ಅಂತಿಮ ಎಕ್ಸಿಟ್ ವೀಸಾ ಕುರಿತ ಮಾಹಿತಿಯನ್ನೊಳಗೊಂಡ ಎಸ್‌ಎಂಎಸ್ ಒಂದನ್ನು ಚಾಲಕನಿಗೆ ಕಳುಹಿಸಿದರು.
ಇದರಿಂದ ಆಘಾತಗೊಂಡ ಅಹ್ಮದ್, ಅಂತಿಮ ಎಕ್ಸಿಟ್ ವೀಸಾವನ್ನು ರದ್ದುಗೊಳಿಸುವಂತೆ ತನ್ನ ಪ್ರಾಯೋಜಕನ ಮನವೊಲಿಸಲು ಮಧ್ಯಪ್ರವೇಶಿಸುವಂತೆ ತನ್ನ ಕೆಲವು ಸ್ನೇಹಿತರನ್ನು ಕೋರಿದರು.
ಇವೆಲ್ಲವುಗಳ ಹೊರತಾಗಿಯೂ, ಉದ್ಯೋಗದಾತರಿಗೆ ಯಾವುದೇ ಕೆಲಸಗಾರರ ಬದುಕನ್ನು ಚಿವುಟಿ ಹಾಕುವುದು ಸುಲಭ ಎನ್ನುವುದು ಮಹತ್ವದ ವಿಷಯವಾಗಿದೆ ಅಹ್ಮದ್ ಹೇಳುತ್ತಾರೆ. ತಾನು ಕೆಲಸದಿಂದ ತೆಗೆದುಹಾಕುವವನು ಕುಟುಂಬವೊಂದನ್ನು ಸಾಕಬೇಕಾಗಿದೆ ಎಂಬುದನ್ನು ಉದ್ಯೋಗದಾತರು ಯಾವತ್ತೂ ಯೋಚಿಸುವುದಿಲ್ಲ ಎನ್ನುತ್ತಾರೆ.
ಮಹಿಳಾ ವಲಸಿಗರೊಬ್ಬರೂ ಇಂಥದೇ ಕಠಿಣ ಪರಿಸ್ಥಿತಿಯನ್ನು ಎದುರಿಸಿದರು. ಅವರು ಮತ್ತು ಅವರ ಮಗಳು ಒಂದೇ ಮಾಲೀಕನ ಬಳಿ ಕೆಲಸ ಮಾಡುತ್ತಿದ್ದರು. ತಾವಿಬ್ಬರೂ ತಮ್ಮ ಪ್ರಸಕ್ತ ಹುದ್ದೆಗಳನ್ನು ತೊರೆಯುತ್ತಿದ್ದೇವೆ ಹಾಗೂ ತಮಗೆ ಬೇರೆ ಕಡೆ ಕೆಲಸ ಆಗುವವರೆಗೆ ಇದೇ ಕಂಪೆನಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂಬುದಾಗಿ ಅವರು ಮಾಲೀಕನಿಗೆ ಹೇಳಿದರು.
ಆದರೆ, ಇದಕ್ಕೆ ಒಪ್ಪದ ಉದ್ಯೋಗದಾತ, ನೀವು ಕೆಲಸ ಬಿಟ್ಟರೆ ಮಹಿಳೆಯ ಮಗಳನ್ನು ಗಡಿಪಾರುಗೊಳಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದರು.