ಕುವೈಟ್ ಇಂಡಿಯಾ ಫ್ರೆಟರ್ನಿಟಿ ಫೋರಮ್ನಿಂದ ‘ಐಕ್ಯತೆ ಕಾಲದ ಬೇಡಿಕೆ’ ಕಾರ್ಯಕ್ರಮ

Update: 2016-05-23 11:42 GMT

ಕುವೈಟ್ ಸಿಟಿ, ಮೇ, 23: ಐಕ್ಯತೆ ಎನ್ನುವುದು ಇಸ್ಲಾಮಿನ ಬುನಾದಿಯಾಗಿದ್ದು, ಮುಸ್ಲಿಮರ ಎಲ್ಲಾ ಆರಾಧನಾ ಕರ್ಮಗಳಲ್ಲಿ ಅದು ಪ್ರತಿಫಲಿಸುತ್ತದೆ. ಅದರ ಪ್ರಾಯೋಗಿಕ ವ್ಯಾಪ್ತಿಯು ವಿಶಾಲವಾಗಿದ್ದು ತನ್ನ ಸಹೋದರನೊಬ್ಬನು ಅನುಭವಿಸುತ್ತಿರುವ ಕಷ್ಟ, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮತ್ತು ಅದರ ಪರಿಹಾರಕ್ಕಾಗಿ ಕಾರ್ಯೋನ್ಮುಖವಾಗುವುದು ನಿಜವಾದ ಐಕ್ಯತೆಯಾಗಿದೆ. ಐಕ್ಯತೆ ಮತ್ತು ಇಸ್ಲಾಮ್ ಎಂಬುದು ಒಂದಕ್ಕೊಂದು ಪೂರಕವಾದದ್ದು. ಪ್ರಸಕ್ತ ಸನ್ನಿವೇಶದಲ್ಲಿ ಭಾರತದಲ್ಲಿ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಐಕ್ಯತೆಯೇ ಪರಿಹಾರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ತಿಳಿಸಿದ್ದಾರೆ.
 
ಅವರು, ಕುವೈಟ್ ಇಂಡಿಯಾ ಫ್ರೆಟರ್ನಿಟಿ ಫೋರಮ್, ಕುವೈಟ್ ಸಿಟಿಯ ಪ್ಯಾರಗಾನ್ ಹೋಟೆಲ್ ಸಭಾಂಗಣದಲ್ಲಿ ಮೇ 20ರಂದು ಆಯೋಜಿಸಿದ್ದ ‘ಐಕ್ಯತೆ ಕಾಲದ ಬೇಡಿಕೆ‘ ಎಂಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಸ್ಲಾಮನ್ನು ಕೇವಲ ನಮಾಜ್ ಮತ್ತು ಮಸೀದಿಗೆ ಸೀಮಿತಗೊಳಿಸದೆ, ದಶಕಗಳಿಂದ ಅಸುರಕ್ಷಿತತೆ ಮತ್ತು ಕಡು ಬಡತನದಿಂದ ನರಳುತ್ತಿರುವ ಮುಸ್ಲಿಮ್ ಸಮುದಾಯವನ್ನು ಮೇಲೆತ್ತಲು ಕಾರ್ಯೋನ್ಮುಖರಾಗಬೇಕಿದೆ ಎಂದರು.

ಗಂಭೀರ ಸಮಸ್ಯೆಗಳಾದ ಬಡತನ, ತಾರತಮ್ಯ ನೀತಿ, ಪ್ರಾತಿನಿಧ್ಯದ ಕೊರತೆ, ಫ್ಯಾಶಿಸ್ಟ್ ದೌರ್ಜನ್ಯ ಮುಂತಾದವುಗಳಿಂದ ಜರ್ಝರಿತವಾಗಿರುವ ಸಮುದಾಯವು ಸಣ್ಣಪುಟ್ಟ ಆಂತರಿಕ ಭಿನ್ನಾಭಿಪ್ರಾಯದ ವಿಷಯದಲ್ಲಿ ಪರಸ್ಪರ ಕಚ್ಚಾಡುತ್ತಿರುವುದು ಸಮುದಾಯದ ಅಧಃಪತನಕ್ಕಿಡಿದ ಕೈಗನ್ನಡಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮುಸ್ಲಿಮರನ್ನು ಪರಸ್ಪರ ಕಚ್ಚಾಡಿಸುವ ಉದ್ದೇಶದಿಂದಲೇ ‘ಮುಸ್ಲಿಮ್ ರಾಷ್ಟ್ರೀಯ ಮಂಚ್’ ಎಂಬ ವೇದಿಕೆಯನ್ನು ಸ್ಥಾಪಿಸಿ ಅದರಲ್ಲಿ ಫ್ಯಾಶಿಸ್ಟರು ಸಫಲರಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಈ ಬಗ್ಗೆ ಸಮುದಾಯ ಜಾಗರೂಕರಾಗಿರಬೇಕು ಎಂದು ಕರೆ ಕೊಟ್ಟರು.

 ಕುವೈಟ್ ಇಂಡಿಯಾ ಫ್ರೆಟರ್ನಿಟಿ ಫೋರಮ್, ಕರ್ನಾಟಕ ಚಾಪ್ಟರ್ ಅಧ್ಯಕ್ಷ ಎಂ. ಮುಸ್ತಕೀಮ್ ಶಿರೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಐಎಫ್‌ಎಫ್‌ನ ಕಾರ್ಯ ವೈಖರಿಯ ಬಗ್ಗೆ ಸಭೆಗೆ ವಿವರಿಸಿ, ಸಮುದಾಯಿಕ ಅಭ್ಯುದಯಕ್ಕಾಗಿ ಮುಸ್ಲಿಮ್ ಸಂಘಟನೆಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯ ಬಗ್ಗೆ ಒತ್ತಿ ಹೇಳಿದರು.

ನಿಂಬ್ಲ್ ಕನ್ಸಲ್ಟೆನ್ಸಿಯ ನಿರ್ದೇಶಕ ಖಲೀಲ್ ಅಡೂರ್ ಮಾತನಾಡಿ, ಸಮುದಾಯದ ಅಭಿವೃದ್ಧಿಯ ಬಗ್ಗೆ ಕಾಳಜಿ ಮತ್ತು ಬದ್ಧತೆಯಿರುವ ರಾಜಕೀಯ ಪಕ್ಷಗಳು ಮತ್ತು ನಾಯಕರು ವಿಶಾಲ ಮೈತ್ರಿಯೊಂದಿಗೆ ಮುಂದುವರಿಯುವ ಅಗತ್ಯತೆಯಿದೆ ಎಂದರು.
 
ಮಣಿಪುರ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಸೈಯದ್ ಬ್ಯಾರಿ ಹಾಗೂ ಕೆ.ಎಂ. ಕರ್ನಾಟಕ ವಿಭಾಗದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಾಂದರ್ಭಿಕವಾಗಿ ಮಾತನಾಡಿದರು. ಕೆಐಎಫ್‌ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಸೈಫುದ್ದೀನ್ ನಾಲಕತ್ ಹಾಗೂ ಉದ್ಯಮಿ ಮುಹಮ್ಮದ್ ಸಲೀಂ ಅಬ್ದುಲ್ ಅಝೀಝ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ದುಲ್ ಖಾದರ್ ತಯ್ಯೂಬ್ ಕಿರಾಅತ್ ಪಠಿಸಿದರು. ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಆಸಿಫ್ ಕಾಪು ವಂದಿಸಿದರು. ಇಮ್ತಿಯಾಝ್ ಅಹ್ಮದ್ ಅರ್ಕುಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News