ತುಂಬೆ ಬಿಲ್ಡರ್ಸ್‌ನಿಂದ ತುಂಬೆ ಹೆಲ್ತ್‌ಕೇರ್‌ನ ಯೋಜನೆಗಳ ನಿರ್ಮಾಣ

Update: 2016-05-24 14:09 GMT

ಅಜ್ಮನ್, ಮೇ 23: ಯುಎಇಯ ಪ್ರಮುಖ ನಿರ್ಮಾಣ ಕಂಪನಿಗಳಲ್ಲಿ ಒಂದಾಗಿರು ತುಂಬೆ ಬಿಲ್ಡರ್ಸ್, ತುಂಬೆ ಹೆಲ್ತ್‌ಕೇರ್ ಡಿವಿಶನ್‌ನ ನೂತನ ಪ್ರಾಜೆಕ್ಟ್‌ಗಳ ನಿರ್ಮಾಣಕ್ಕೆ ಸಹಿ ಹಾಕಿದೆ. ಅಜ್ಮನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಈ ಸಂಬಂಧ ತುಂಬೆ ಬಿಲ್ಡರ್ಸ್ ಮತ್ತು ತುಂಬೆ ಹೆಲ್ತ್‌ಕೇರ್ ಡಿವಿಶನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ತುಂಬೆ ಗ್ರೂಪ್‌ನ ಕನ್‌ಸ್ಟ್ರಕ್ಷನ್ ಆ್ಯಂಡ್ ರಿನೋವೇಶನ್ ಡಿವಿಶನ್‌ನಿಂದ ನಿರ್ವಹಿಸಲ್ಪಡುವ ಉನ್ನತ ಮಟ್ಟದ ನಿರ್ಮಾಣ ಕಂಪನಿಯಾದ ತುಂಬೆ ಬಿಲ್ಡರ್ಸ್, ತುಂಬೆ ಗ್ರೂಪ್‌ನಡಿ ಬರಲಿರುವ ಹಲವಾರು ಪ್ರಮುಖ ಪ್ರಾಜೆಕ್ಟ್‌ಗಳನ್ನು ನಿರ್ಮಿಸಲಿದೆ. ಇದು ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ದೀರ್ಘಾವಧಿಯ ಯೋಜನೆಗಳನ್ನು ಸಾಕಾರಗೊಳಿಸುವ ಜತೆಗೆ ಆರೋಗ್ಯ ಸಂರಕ್ಷಣಾ ಸೌಲಭ್ಯವನ್ನು ವಿಸ್ತರಿಸಲಿದೆ.

ಈ ಕುರಿತಾದ ಒಪ್ಪಂದಕ್ಕೆ ತುಂಬೆ ಬಿಲ್ಡರ್ಸ್ ಮತ್ತು ತುಂಬೆ ಹೆಲ್ತ್‌ಕೇರ್ ಡಿವಿಶನ್ ನಡುವೆ ಮೇ 23ರಂದು ಸಹಿ ಹಾಕಲಾಗಿದ್ದು, ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದೀನ್, ಮತ್ತು ತುಂಬೆ ಗ್ರೂಪ್‌ನ ಹೆಲ್ತ್‌ಕೇರ್ ಡಿವಿಶನ್‌ನ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್, ತುಂಬೆ ಗ್ರೂಪ್‌ನ ಹಣಕಾಸು ಮತ್ತು ಮುಂಗಡಪತ್ರ ವಿಭಾಗದ ನಿರ್ದೇಶಕ ನಝೀರ್ ಹುಸೇನ್, ತುಂಬೆ ಗ್ರೂಪ್‌ನ ಕನ್‌ಸ್ಟ್ರಕ್ಷನ್ ಆ್ಯಂಡ್ ರಿನೋವೇಶನ್ ಡಿವಿಶನ್‌ನ ನಿರ್ದೇಶಕ (ಕಾರ್ಯಾಚರಣೆ) ಅಕ್ರಮ್ ಮೊಯ್ದೀನ್, ತುಂಬೆ ಬಿಲ್ಡರ್ಸ್‌ನ ನಿರ್ದೇಶಕ (ಕಾರ್ಯಾಚರಣೆ) ಫರ್ವಾಝ್, ತುಂಬೆ ಗ್ರೂಪ್‌ನ ಸೌಕರ್ಯ ನಿರ್ವಹಣೆ ವಿಭಾಗದ ಸಹಾಯಕ ನಿರ್ದೇಶಕ ಅಶೆರ್ ಜಹಾಂಗೀರ್ ಮತ್ತು ಗ್ರೂಪ್‌ನ ಇತರ ಆಡಳಿತ ತಂಡದ ಸದಸ್ಯರು ಉಪಸ್ಥಿತರಿದ್ದರು.

3,56,000 ಚದರ ಅಡಿ ವಿಸ್ತೀರ್ಣದ 300ಕ್ಕೂ ಅಧಿಕ ಬೆಡ್‌ಗಳ ತುಂಬೆ ಆಸ್ಪತ್ರೆ, 37,000 ಚದರ ಅಡಿ ವಿಸ್ತೀರ್ಣದ 60 ಆಸನ ಸೌಲಭ್ಯವುಳ್ಳ ದಂತ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರವು ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಲಿರುವ ನೂತನ ಪ್ರಾಜೆಕ್ಟ್‌ಗಳಾಗಿವೆ. 15 ತಿಂಗಳ ಅವಧಿಯಲ್ಲಿ ಈ ನೂತನ ಪ್ರಾಜೆಕ್ಟ್‌ಗಳು ಸಂಪೂರ್ಣಗೊಳ್ಳಲಿವೆ.

ಈ ಆಸ್ಪತ್ರೆ ನಿರ್ಮಾಣವಾದಲ್ಲಿ, ಮಧ್ಯ ಏಷ್ಯಾದ ಪ್ರಥಮ ಅತೀ ದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆಯಾಗಿ ಗುರುತಿಸಿಕೊಳ್ಳಲಿದೆ. ಮಾತ್ರವಲ್ಲದೆ ಈ ಪ್ರಾಜೆಕ್ಟ್‌ಗಳ ಮೂಲಕ ತುಂಬೆ ಗ್ರೂಪ್ ಈ ಪ್ರಾಂತ್ಯದ ಅತೀ ದೊಡ್ಡ ಖಾಸಗಿ ಶೈಕ್ಷಣಿಕ ಆರೋಗ್ಯ ಸೌಲಭ್ಯವನ್ನು ಒದಗಿಸುವ ಸ್ಥಾನಮಾನವನ್ನು ಪಡೆಯಲಿದೆ. ತುಂಬೆ ಮೆಡಿಕಲ್ ಯುನಿವರ್ಸಿಟಿ ಶೈಕ್ಷಣಿಯ ಸಂಸ್ಥೆಯಾಗಿರುವ ಜತೆಯಲ್ಲೇ, ನೂತನ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿದೆ ಮತ್ತು ಮಿತದರದಲ್ಲಿ ಉನ್ನತ ದರ್ಜೆಯ ಆರೋಗ್ಯ ಸಂರಕ್ಷಣೆಯನ್ನು ಒದಗಿಸುವ ತುಂಬೆ ಗ್ರೂಪ್‌ನ ಸಂಪ್ರದಾಯಕ್ಕೆ ಒತ್ತು ನೀಡಲಿದೆ ಎಂದು ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದೀನ್ ಅಭಿಪ್ರಾಯಿಸಿದ್ದಾರೆ.

ಹಾಸ್ಟೆಲ್, ಯುವಕರು ಮತ್ತು ಯುವತಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‌ಗಳು ಮತ್ತು ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಂದ ಕೂಡಿದ 7,60,000 ಚದರ ಅಡಿ ವಿಸ್ತೀರ್ಣದ ಹೌಸಿಂಗ್ ಪ್ರಾಜೆಕ್ಟ್ ಕೂಡಾ ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜಿಎಂಯುನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕ್ಯಾಂಪಸ್‌ನೊಳಗೆ ವಾಸಮಾಡುವ ಅವಕಾಶವನ್ನು ಕಲ್ಪಿಸಲಿದೆ. ಈ ವ್ಯವಸ್ಥೆಯು ಸ್ಟುಡಿಯೋ, ಒಂದು ಮತ್ತು ಎರಡು ಬೆಡ್‌ರೂಂಗಳ ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ ಎಂದು ಕಂಪನಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News