ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪ: ಸೌದಿ ವಲಸಿಗರಲ್ಲಿ ಆತಂಕ

Update: 2016-06-09 12:59 GMT

ರಿಯಾದ್, ಜೂ. 9: ವಿದೇಶಗಳಿಗೆ ಕಳುಹಿಸುವ ಹಣದ ಮೇಲೆ 6 ಶೇಕಡ ತೆರಿಗೆ ವಿಧಿಸುವ ಸೌದಿ ಅರೇಬಿಯದ ಪ್ರಸ್ತಾಪದ ಹಿನ್ನೆಲೆಯಲ್ಲಿ, ಆ ದೇಶದಲ್ಲಿನ ತಮ್ಮ ಭವಿಷ್ಯದ ಬಗ್ಗೆ ವಲಸಿಗ ಉದ್ಯೋಗಿಗಳು ಚಿಂತಿತರಾಗಿದ್ದಾರೆ.

‘ಅರಬ್ ನ್ಯೂಸ್’ ಜೊತೆ ಮಾತನಾಡಿದ ವಿವಿಧ ದೇಶಗಳ ವಲಸಿಗರು, ಕಷ್ಟಪಟ್ಟು ಸಂಪಾದಿಸಿದ ತಮ್ಮ ಹಣದ ಮೇಲೆ ಇಷ್ಟೊಂದು ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸುವುದು ಅನ್ಯಾಯ ಎಂಬ ಒಕ್ಕೊರಲ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಪ್ರಸ್ತಾಪವನ್ನು ತಿರಸ್ಕರಿಸುವಂತೆಯೂ ಅವರು ಸೌದಿ ಸರಕಾರವನ್ನು ಒತ್ತಾಯಿಸಿದರು.

‘‘ಸೌದಿ ಅರೇಬಿಯದಲ್ಲಿ ನಾವು ಗಳಿಸಿದ ಹಣವನ್ನು ಸಾಮಾನ್ಯವಾಗಿ ಖರ್ಚು ಮಾಡುತ್ತೇವೆ ಹಾಗೂ ನಮ್ಮ ಸಂಪಾದನೆಯ ಒಂದು ಸಣ್ಣ ಮೊತ್ತವನ್ನು ಮನೆಗೆ ಕಳುಹಿಸುತ್ತೇವೆ. ನಿವೃತ್ತಿ ನಂತರದ ನಮ್ಮ ಜೀವನಕ್ಕೆ ಅಥವಾ ಉನ್ನತ ಶಿಕ್ಷಣ ಪಡೆಯುತ್ತಿರುವ ನಮ್ಮ ಮಕ್ಕಳ ಶುಲ್ಕ ಪಾವತಿಗಾಗಿ ಈ ಹಣವನ್ನು ಬಳಸಲಾಗುತ್ತದೆ. ಆ ಹಣವನ್ನು ಕಳುಹಿಸುವಾಗ ಅದಕ್ಕೆ 6 ಶೇಕಡ ತೆರಿಗೆ ವಿಧಿಸಿದರೆ, ಅದು ನಮ್ಮ ಕಷ್ಟಪಟ್ಟು ಗಳಿಸಿದ ಹಣದ ಮೇಲೆ ತೆರಿಗೆ ವಿಧಿಸಿದಂತೆ’’ ಎಂದು ರಿಯಾದ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಐಟಿ ಉದ್ಯೋಗಿಯೊಬ್ಬರು ಹೇಳಿದರು.

ವಲಸಿಗರು ಕಳುಹಿಸುವ ಹಣದ ಮೇಲೆ 6 ಶೇಕಡ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಶುರಾ ಕೌನ್ಸಿಲ್‌ನ ಹಣಕಾಸು ಸಮಿತಿ ಬೆಂಬಲಿಸಿದೆ ಎಂದು ‘ಅರಬ್ ನ್ಯೂಸ್’ ಕಳೆದ ವಾರ ವರದಿ ಮಾಡಿತ್ತು.

ತೆರಿಗೆಯು ಮೊದಲ ವರ್ಷದಲ್ಲಿ 6 ಶೇ. ಆಗಿದ್ದು ಕ್ರಮೇಣ ಕಡಿಮೆ ಮಾಡಲಾಗುತ್ತದೆ ಹಾಗೂ ಐದನೆ ವರ್ಷದ ಬಳಿಕ ಅದು ಖಾಯಂ ಆಗಿ 2 ಶೇ. ಆಗಿರುತ್ತದೆ ಎಂಬ ಅಂಶಗಳು ಪ್ರಸ್ತಾಪದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News