ಮಸ್ಕತ್: ಅನಿವಾಸಿ ಭಾರತೀಯ ನಾಪತ್ತೆ

Update: 2016-06-15 10:00 GMT

ಮಸ್ಕತ್,ಜೂ.15: ಮಸ್ಕತ್ ನಗರದಿಂದ ಸುಮಾರು 217 ಕಿ.ಮೀ. ದೂರವಿರುವ ಇಬ್ರಿ ಸಮೀಪದ ಸುನೈನಾದ ಪೆಟ್ರೋಲ್ ಬಂಕ್ ಒಂದರಲ್ಲಿ ಉದ್ಯೋಗಿಯಾಗಿರುವ ಕೇರಳ ಮೂಲದ ಅನಿವಾಸಿ ಭಾರತೀಯ ಜಾನ್ ಫಿಲಿಪ್ ಕಳೆದ ಶುಕ್ರವಾರ ರಾತ್ರಿಯಿಂದ ನಿಗೂಢವಾಗಿ ಕಾಣೆಯಾಗಿದ್ದು ಅವರನ್ನು ಹುಡುಕಿಕೊಡುವಂತೆ ಅವರ ಪತ್ನಿ ಬಿನು ಜಾನ್ ಓಮನ್ ಅಧಿಕಾರಿಗಳನ್ನು ವಿನಂತಿಸಿದ್ದಾರೆ.

ಜಾನ್ ಅವರ ಕಂಪೆನಿ ಅಧಿಕಾರಿಗಳ ಪ್ರಕಾರ ಕಚೇರಿಯಿಂದ 4,000 ರಿಂದ 5,000 ಒಮಾನಿ ರಿಯಾಲ್ ಕಾಣೆಯಾಗಿದ್ದು ಕಚೇರಿಯಲ್ಲಿ ರಕ್ತದ ಕಲೆಗಳೂ ಕಂಡು ಬಂದಿವೆ ಹಾಗೂ ಅಲ್ಲಿನ ಸಿಸಿಟಿವಿ ಕ್ಯಾಮರಾಗಳು ಹಾನಿಗೊಂಡಿವೆ.

ಶನಿವಾರ ಪೆಟ್ರೋಲ್ ಬಂಕಿಗೆ ಬಂದ ಇನ್ನೊಬ್ಬ ಉದ್ಯೋಗಿ ಅಲ್ಲಿನ ಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

‘‘ಜಾನ್ ಅವರ ಪತ್ನಿ ಬಿನು ಸರಿಯಾಗಿ ಆಹಾರ ಸೇವಿಸದೆ ಇಡೀ ದಿನ ದೇವರ ಕೋಣೆಯಲ್ಲಿ ಕಳೆಯುತ್ತಿದ್ದಾರೆ. ಅವರ ಮಕ್ಕಳೂ ಶಾಲೆಗೆ ಹೋಗುತ್ತಿಲ್ಲ. ಅವರು ಸುರಕ್ಷಿತವಾಗಿ ವಾಪಸಾಗುತ್ತಾರೆಂದು ನಾವು ಪ್ರಾರ್ಥಿಸುತ್ತೇವೆ. ನಾವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕೇರಳ ಸರಕಾರವನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದೇವೆ,’’ಎಂದು ಜಾನ್ ಅವರ ಸಹೋದರ ಜೇಕಬ್ ಫಿಲಿಪ್ ಹೇಳಿದ್ದಾರೆ.

‘‘ಆತ ಒಳ್ಳೆಯ ವ್ಯಕ್ತಿಯಾಗಿದ್ದ. ಆದರೆ ಆತ ಹಣದೊಂದಿಗೆ ಪರಾರಿಯಾಗಿದ್ದಾನೆಂದು ಕೆಲವರು ಹೇಳುತ್ತಿದ್ದಾರೆ. ಆತ ಹಾಗೆ ಯಾವತ್ತೂ ಮಾಡುವವನಲ್ಲ. ಆತ ದೇವರ ಮೇಲೆ ಭಯಭಕ್ತಿಯಿರುವ ಮನುಷ್ಯನಾಗಿದ್ದ,’’ಎಂದೂ ಅವರು ಹೇಳಿದ್ದಾರೆ.

ಜಾನ್ ಅವರ ಹಿರಿಯ ಮಗ 12ನೆ ತರಗತಿಯಲ್ಲಿ ಕಲಿಯುತ್ತಿದ್ದರೆ ಕಿರಿಯ ಪುತ್ರಿ ಐದನೆ ತರಗತಿಯಲ್ಲಿದ್ದಾಳೆ.

ಜಾನ್ ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಒಮನ್‌ನಲ್ಲಿರುವ ಅವರ ಸ್ನೇಹಿತರು ಹಾಗೂ ಅವರ ಕಂಪೆನಿಯ ಮ್ಯಾನೇಜರ್ ಕಶಿಫ್ ನಿಸಾರ್‌ಹೇಳುತ್ತಾರೆ. ಜಾನ್ ನಾಪತ್ತೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸಹೋದ್ಯೋಗಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡು ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News