ಮಾನವ ಕಳ್ಳಸಾಗಾಟ: ರಿಯಾದ್‌ನಲ್ಲಿ ಸಿಲುಕಿಕೊಂಡಿರುವ ಕೇರಳದ ಮಹಿಳೆ

Update: 2016-06-23 11:01 GMT
ಸಾಂದರ್ಭಿಕ ಚಿತ್ರ

 ರಿಯಾದ್, ಜೂನ್ 23: ಮನೆಕೆಲಸಗಾರ್ತಿಯರ ನೇಮಕಾತಿಯ ಕಾನೂನನ್ನು ಉಲ್ಲಂಘಿಸಿ ಸೌದಿ ಅರೇಬಿಯಾಕ್ಕೆ ಟ್ರಾವೆಲ್ ಏಜೆನ್ಸಿಯೊಂದು ಕೇರಳದ ಮಹಿಳೆಯೊಬ್ಬರನ್ನು ಕಳುಹಿಸಿದ್ದು ಅವರೀಗ ತೀರಾ ದೌರ್ಜನ್ಯಕ್ಕೊಳಗಾಗಿದ್ದಾರೆ. ಸ್ವತಃ ಪೀಡಿತ ಮಹಿಳೆ ಭಾರತೀಯ ರಾಯಭಾರಿ ಕಚೇರಿಗೆ ದೂರುನೀಡಿದ್ದಾರೆ. ತಿರುವನಂತಪುರಂನ ನಿವಾಸಿ ಶ್ರೀಜಾ ಸತಿ ತಂಗಪ್ಪನ್(39)ರನ್ನು ತಿರುವನಂತಪುರಂನ ಟ್ರಾವೆಲ್ ಏಜನ್ಸಿಯೊಂದು 70,000ರೂ. ಶುಲ್ಕವಿಧಿಸಿ ರಿಯಾದ್‌ನಲ್ಲಿ ಮನೆಕೆಲಸಕ್ಕಾಗಿ ಹೌಸ್‌ವೈಫ್ ವೀಸಾದಲ್ಲಿ ಕಳುಹಿಸಿಕೊಟ್ಟಿತ್ತು.

ಒಬ್ಬ ಸೌದಿ ಪ್ರಜೆ ಅವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಿ ಅಬಾಹದ ನೈಜ ಸ್ಫೋನ್ಸರ್‌ಗೆ ತಲುಪಿಸಿದ್ದ. ಇವರಿಗೆ ಐದು ಮನೆಗಳನ್ನು ಶುಚಿಗೊಳಿಸುವ ಕೆಲಸ ವಹಿಸಲಾಗಿತ್ತು. ದಿನಾಲೂ ಬೆಳಗ್ಗೆ ಏಳು ಗಂಟೆಯಿಂದ ಮರುದಿವಸ ಬೆಳಗ್ಗೆ ಎರಡು ಗಂಟೆವರೆಗೆ ವಿಶ್ರಾಂತಿಯಿಲ್ಲದೆ ಕೆಲಸ ಮಾಡಬೇಕಾಗಿತ್ತು. ಮಾತ್ರವಲ್ಲ ದೈಹಿಕ ಕಿರುಕುಳ ಕೂಡಾ ಅನುಭವಿಸಿದ್ದೇನೆ ಎಂದು ಶ್ರೀಜಾ ರಾಯಭಾರಿ ಕಚೇರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಭಾರತಮತ್ತು ಸೌದಿ ಸರಕಾರದ ನಡುವೆ ಇರುವ ಉದ್ಯೋಗ ಒಪ್ಪಂದ ಪಾಲಿಸದೆ ಮಹಿಳೆಯನ್ನು ಸೌದಿಗೆ ಕಳುಹಿಸಲಾಗಿತ್ತು. ಮನೆಕೆಲಸಕ್ಕೆ ಜನಬೇಕಾದವರು ಭಾರತೀಯ ರಾಯಭಾರ ಕಚೇರಿಯಲ್ಲಿ 9000 ರಿಯಾಲ್ ಮುಂಗಡ ಪಾವತಿ ಮಾಡಿರಬೇಕಾಗುತ್ತದೆ. ಇದ್ಯಾವುದನ್ನೂ ಶ್ರೀಜಾರ ವಿಷಯದಲ್ಲಿ ಪಾಲಿಸಲಾಗಿಲ್ಲ. ಜೊತೆಗೆ ವೇತನದ ಒಪ್ಪಂದವೂ ಮಾಡಿರಲಿಲ್ಲ. ಭಾರತ ಸರಕಾರದ ಮದದ್ ಪೋರ್ಟಲ್ ಮತ್ತು ಭಾರತ ರಾಯಭಾರಿ ಕಚೇರಿಯ ಕಮ್ಯೂನಿಟಿ ವೆಲ್ಫೇರ್ ವಿಂಗ್‌ನಲ್ಲಿ ದೂರು ನೀಡಲಾಗಿದೆ.

ಅತಿಶೀಘ್ರ ಮಹಿಳೆಯನ್ನು ಊರಿಗೆ ಕರೆತರಬೇಕೆಂದು ಭಾರತದ ರಾಯಭಾರಿ ಕಚೇರಿಯಿಂದ ತಿರುವನಂತಪುರಂ ಟ್ರಾವೆಲ್ ಏಜೆನ್ಸಿಗೆ ತಿಳಿಸಲಾಗಿದೆ. ಇಲ್ಲದಿದ್ದರೆ ರಿಕ್ರ್ಯೂಟ್‌ಮೆಂಟ್ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದುಎಚ್ಚರಿಕೆಯನ್ನೂ ನೀಡಲಾಗಿದೆ. ಏಜೆಂಟ್ ಸೌದಿಯ ಸ್ಪೋನ್ಸರ್‌ನನ್ನು ಸಂಪರ್ಕಿಸಿ ಶ್ರೀಜಾರನ್ನು ಊರಿಗೆ ಕರೆತರುವ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News