ಕುರ್ ಆನ್ ಜಗತ್ತಿಗೆ ಶಾಂತಿಯ ಸಂದೇಶ ಸಾರಿದೆ: ಶಾಫಿ ಸಅದಿ

Update: 2016-06-25 16:11 GMT

ದುಬೈ, ಜೂ.25: ಪ್ರಪಂಚದ ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ತಲೆದೋರುತ್ತಿರುವ ಸರ್ವ ಸಮಸ್ಯೆಗಳಿಗೆ ಪವಿತ್ರ ಕುರ್‌ಆನಿನ ಸುಂದರ ಸಂದೇಶ ಮಾತ್ರ ಪರಿಹಾರ ಎಂದು ದುಬೈ ಅಂತಾರಾಷ್ಟ್ರೀಯ ಹೋಲಿ ಕುರ್ ಆನ್ ಅವಾರ್ಡ್‌ನ ಅತಿಥಿ, ಖ್ಯಾತ ವಿದ್ವಾಂಸ ಕರ್ನಾಟಕ ವಕ್ಫ್ ಮಂಡಳಿ ನಿರ್ದೇಶಕ ಹಾಗೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು ಹೇಳಿದರು.

‘ಶಾಂತಿಯುತ ಜಗತ್ತಿಗೆ ಕುರ್‌ಆನಿನ ಪಾಠಗಳು’ ಎಂಬ ವಿಷಯದಲ್ಲಿ ದುಬೈ ಕಿಸೈಸ್ ಇಂಡಿಯನ್ ಅಕಾಡಮಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಕುರ್ ಆನ್ ಪ್ರಭಾಷಣ ವೇದಿಕೆಯಲ್ಲಿ ಮಾತನಾಡಿದ ಅವರು, ಜಗತ್ತು ಇಂದು ಶಾಂತಿಯನ್ನು ಬಯಸುತ್ತಿದೆ. ಶಾಂತಿಯ ಪರಿಹಾರ ಮಾರ್ಗವನ್ನು ಕಂಡು ಹಿಡಿಯಬೇಕಾದ ಹಲವರು ಇನ್ನಷ್ಟು ಸಮಸ್ಯೆಗಳಲ್ಲಿ ಸಿಲುಕಿ ನರಳುತ್ತಿರುವ ದಯನೀಯವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಾಗತಿಕ ಮಟ್ಟದಲ್ಲಿ ಶಾಂತಿಯನ್ನು ನಿರೀಕ್ಷಿಸುವ ಮಾನವ ಸಮಾಜಕ್ಕೆ ಪವಿತ್ರ ಕುರ್ಆನಿನ ಸಂದೇಶ ಅತ್ಯಂತ ಸೂಕ್ತ ಪರಿಹಾರವೆಂದು ಮನಗಂಡು ಅವುಗಳ ಕಡೆಗೆ ಮರಳುತ್ತಿರುವುದನ್ನು ನಮಗೆ ಕಾಣಬಹುದು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮುಸ್ಲಿಮ್ ಜನಸಂಖ್ಯೆಯ ಹೆಚ್ಚಳ ಈ ಬಗ್ಗೆ ದೃಢೀಕರಿಸುತ್ತಿದೆ ಎಂದರು.

ಸಮಾಜದ ಸ್ವಾಸ್ಥಕ್ಕೆ ಧಕ್ಕೆ ತರುವ ಪ್ರಮುಖ ಭಾಗವಾದ ಧಾರ್ಮಿಕ ವೌಲ್ಯಗಳ ಕುಸಿತವು ಜಗತ್ತಿನಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ಪ್ರತಿಯೊಂದು ಧರ್ಮಾನುಯಾಯಿಗಳು ತಮ್ಮ ಧರ್ಮದ ವೌಲ್ಯಗಳನ್ನು ಅರಿತು ಸಾಮಾಜಿಕ ರಂಗದಲ್ಲಿ ಮುಂದುವರಿದರೆ ಅಶಾಂತಿ ನಿರ್ಮೂಲನೆ ಸಾಧ್ಯ. ಪವಿತ್ರ ಕುರ್ ಆನಿನ ಸಂದೇಶ ಈ ನಿಟ್ಟಿನಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ ಎಂದ ಅವರು ಪರಸ್ಪರ ಪ್ರೀತಿ ಮಾನವ ಸಮೂಹವನ್ನು ಶಾಂತಿಯೆಡೆಗೆ ಆಹ್ವಾನಿಸುತ್ತದೆ ಎಂದರು.

ದುಬೈ ಅಂತಾರಾಷ್ಟ್ರೀಯ ಹೋಲಿ ಕುರ್ ಆನ್ ಅವಾರ್ಡ್ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ವಿವಿಧ ರಾಷ್ಟ್ರಗಳ ಮುಸ್ಲಿಮ್ ವಿದ್ವಾಂಸರಿಗೆ ಆತಿಥ್ಯ ನೀಡುತ್ತಿದ್ದು, ಕರ್ನಾಟಕ ರಾಜ್ಯದಿಂದ ಇದೇ ಮೊದಲ ಬಾರಿಗೆ ಶಾಫಿ ಸಅದಿ ರವರು ಆಯ್ಕೆಗೊಂಡು ಭಾಷಣ ಮಾಡಿದರು.

ಜಾಮಿಅ ಸಅದಿಯ್ಯ ದುಬೈ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮವನ್ನು ದುಬೈ ಇಸ್ಲಾಮಿಕ್ ಕಾರ್ಯಾಲಯದ ಪ್ರಮುಖ ಶೈಖ್ ಮುಹಮ್ಮದ್ ಅಲ್ ಹಾಶಿಮಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಕೆಸಿಎಫ್ ದುಬೈ ಸಮಿತಿ ವತಿಯಿಂದ ಶಾಫಿ ಸಅದಿಯವರಿಗೆ ಕೆಸಿಎಫ್ ಐಇ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ, ಕೆಸಿಎಫ್ ಯುಎಇ ಶಿಕ್ಷಣ ವಿಭಾಗ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ಝೈತ್ರವರು ಗೌರವ ಫಲಕ ನೀಡಿ ಗೌರವಿಸಿದರು.

ದುಬೈ ಅಂತಾರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಸಮಿತಿಯ ಪ್ರತಿನಿಧಿ ಶೈಖ್ ಸ್ವಾಲಿಹ್ ಅಲಿ ಅಬ್ದುಲ್ಲ, ವಡಶ್ಶೇರಿ ಹಸನ್ ಮುಸ್ಲಿಯಾರ್, ಸಅದಿಯ್ಯ ದುಬೈ ಸೆಂಟರ್ನ ಮುದರ್ರಿಸ್ ಅಹ್ಮದ್ ಮುಸ್ಲಿಯಾರ್ ಮೇಲ್ಪರಂಬ್, ಅಧ್ಯಕ್ಷ ಕರೀಂ ತಲಂಗರ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು, ಬಿಸಿಎಫ್ ಅಧ್ಯಕ್ಷ ಡಾ. ಯೂಸುಫ್, ಡಾ. ಮುಹಮ್ಮದ್ ಕಾಪು, ಐಸಿಎಫ್ ಗಲ್ಫ್ ಘಟಕದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಬಾಡ್, ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಸೇರಿದಂತೆ ವಿವಿಧ ಸಾಮಾಜಿಕ, ಶೈಕ್ಷಣಿಕ ಮುಖಂಡರು ಹಾಗೂ ಅನೇಕ ಅನಿವಾಸಿ ಉದ್ಯಮಿಗಳು ಭಾಗವಹಿಸಿದ್ದರು.

ದಕ್ಷಿಣ ಕರ್ನಾಟಕ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ಕೂರ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ದುಬೈ ಅಂತಾರಾಷ್ಟ್ರೀಯ ಹೋಲಿ ಕುರ್ಆನ್ ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ತ್ವಾಹ ಮುಹಮ್ಮದ್ ಕಿರಾಅತ್ ಪಠಿಸಿದರು. ಸಅದಿಯ್ಯ ದುಬೈ ಸೆಂಟರ್ನ ವ್ಯವಸ್ಥಾಪಕ ಅಬೂಬಕರ್ ಸಅದಿ ಆಲಕ್ಕಾಡ್ ಸ್ವಾಗತಿಸಿ, ಕಾರ್ಯದರ್ಶಿ ಅಮೀರ್ ಹಸನ್ ಕನ್ಯಾಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News