ಡಾ. ಕಾಪು ಮುಹಮ್ಮದ್‌ರಿಗೆ ಅಮೆರಿಕ ವಿವಿಯಿಂದ ಡಾಕ್ಟರೇಟ್

Update: 2016-06-27 07:06 GMT

ದುಬೈ, ಜೂ.27: ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ಡೀನ್ ಹಾಗೂ ನಿರ್ದೇಶಕ, ಉಡುಪಿಯ ಕಾಪು ಮೂಲದ ಡಾ. ಕಾಪು ಮುಹಮ್ಮದ್ ಅಮೆರಿಕದ ಕ್ಯಾಲಿಫೋರ್ನಿಯಾದ ಅಪೋಲೋಸ್ ಯುನಿವರ್ಸಿಟಿಯಿಂದ ಆಡಳಿತ ವ್ಯವಹಾರ ವಿಭಾಗದಲ್ಲಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಪದವಿಯನ್ನು ಸ್ವೀಕರಿಸಿದರು.

ಡಾ. ಕಾಪು ಮುಹಮ್ಮದ್ ಅವರು ಮಂಡಿಸಿದ ‘ ಎ ಕ್ರಿಟಿಕಲ್ ಇವಾಲ್ಯುವೇಷನ್ ಆಫ್ ಸ್ಕಿಲ್ಸ್ ಆಫ್ ಟುಡೇಸ್ ಸ್ಟುಡೆಂಟ್ಸ್ ಇನ್ ಲೀಡಿಂಗ್ ಆ್ಯನ್‌ಮ್ಯಾನೇಜಿಂಗ್ ಎ ಬ್ಯುಸಿನೆಸ್ ಎಂಟರ್‌ಪ್ರೈಸ್ ಇನ್ ದ ಯುಎಇ’ ಎನ್ನುವ ಪ್ರಬಂಧಕ್ಕೆ ಅಪೋಲೋಸ್ ವಿಶ್ವವಿದ್ಯಾನಿಲಯದ ಡಾ. ಪೌಲ್ ಎಡಿಸನ್ ಅವರ ಅಧ್ಯಕ್ಷತೆಯ ಪ್ರೌಢ ಪ್ರಬಂಧ ಸಮಿತಿಯು ಡಾಕ್ಟರೇಟ್ ನೀಡಿದೆ.

ಡಾ. ಕಾಪು ಮುಹಮ್ಮದ್ ಅವರು ಭಾರತ ಹಾಗೂ ವಿದೇಶಗಳ ವಿಶ್ವವಿದ್ಯಾನಿಲಯಗಳಿಂದ 9 ವಿವಿಧ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಇವರು ಬ್ಯಾರಿ ಸಮುದಾಯದಲ್ಲಿ 9 ಡಾಕ್ಟರೇಟ್‌ಗಳನ್ನು ಪಡೆದ ಏಕೈಕ ಸಾಧಕ.

ಸುಮಾರು 25 ವರ್ಷಗಳಿಗಿಂತಲೂ ಅಧಿಕ ಬೋಧನಾ ಅನುಭವವನ್ನು ಹೊಂದಿರುವ ಅವರು, ಸುಮಾರು 18 ವರ್ಷಗಳಿಂದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಡಳಿತ ಸಂಶೋಧನೆ ಮತ್ತು ಅಭಿವೃದ್ಧಿ, ಸಂಶೋಧನಾತ್ಮಕ ಜ್ಞಾನವನ್ನು ಹೊಂದಿದ್ದು, ತಮ್ಮ ಸಾಧನೆಗಾಗಿ ನೂರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳನ್ನೂ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News