"ವಿಶ್ವಸಂಸ್ಥೆಯ ಅನುಭವದಿಂದ ಭಾರತೀಯ ಸಮುದಾಯಕ್ಕೆ ಅತ್ಯುತ್ತಮ ಸೇವೆ’’
ಜಿದ್ದಾ, ಜೂ.27: ಜಿದ್ದಾದಲ್ಲಿ ಭಾರತದ ನೂತನ ಕಾನ್ಸುಲ್ ಜನರಲ್ ಆಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಮುಹಮ್ಮದ್ ನೂರ್ ರೆಹಮಾನ್ ಶೇಖ್ ತಾವು ಸೌದಿ ಅರೇಬಿಯಾದ ಪಶ್ಚಿಮ ಭಾಗದಲ್ಲಿರುವ 12 ಲಕ್ಷಕ್ಕೂ ಅಧಿಕ ಭಾರತೀಯ ಸಮುದಾಯಕ್ಕೆ ಹಾಗೂ ಹಜ್ ಯಾತ್ರಿಕರಿಗೆ ವಿಶ್ವ ಸಂಸ್ಥೆಯಲ್ಲಿನ ತಮ್ಮ ಸೇವೆಯ ಅನುಭವವನ್ನು ಸದುಪಯೋಗ ಪಡಿಸಿಕೊಂಡು ಕಾನ್ಸುಲೇಟ್ ವತಿಯಿಂದ ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿರುವ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿಯಾಗಿದ್ದ ಮುಹಮ್ಮದ್ ನೂರ್ ಜೂ.19 ರಂದು ಜಿದ್ದಾದ ಕಾನ್ಸುಲ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
‘‘ವಿಶ್ವಸಂಸ್ಥೆಯಲ್ಲಿನ ನನ್ನ ಸೇವಾವಧಿ ಆಸಕ್ತಿದಾಯಕವಾಗಿತ್ತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ವಿಶ್ವ ಸಂಸ್ಥೆಯ ಸಭೆಗಳಲ್ಲಿ ಪ್ರತಿನಿಧಿಸುವ ಹಾಗೂ ಹೇಳಿಕೆಗಳನ್ನು ತಯಾರಿಸುವ ಕಾರ್ಯ ಒಂದು ವಿನೂತನ ಅನುಭವವಾಗಿತ್ತು,’’ಎಂದು ಅವರು ಹೇಳಿದ್ದಾರೆ.
ವಿಶ್ವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮುನ್ನ ಜಿದ್ದಾದ ಡೆಪ್ಯುಟಿ ಕಾನ್ಸುಲ್ ಜನರಲ್ ಹಾಗೂ ಹಜ್ ಕಾನ್ಸುಲ್ ಆಗಿ ಸೇವೆ ಸಲ್ಲಿಸಿರುವ ಮುಹಮ್ಮದ್ ನೂರ್ ಭಾರತೀಯ ಸಮುದಾಯ ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸದಂತೆ ನೋಡಿಕೊಳ್ಳುವುದೇ ತಮ್ಮ ಪ್ರಥಮ ಆದ್ಯತೆಯೆಂದು ಹೇಳಿದ್ದಾರೆ.
ಕಾನ್ಸುಲೇಟ್ ಜನರಲ್ ಹೊಸ ವಿಶಾಲ ಕಚೇರಿ ಹೊಂದುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿಯೂ ಅವರು ತಿಳಿಸಿದ್ದಾರೆ.