ಪತಿ-ಪತ್ನಿ ಪರಸ್ಪರ ‘ಮೊಬೈಲ್ ಗೂಢಾಚಾರಿಕೆ’ ವಿಚ್ಛೇದನಕ್ಕೆ ದಾರಿ

Update: 2016-06-28 07:35 GMT

ಜಿದ್ದಾ, ಜೂ.28: ಸೌದಿಯ ಉನ್ನಂತ ವಿದ್ವಾಂಸರಾಗಿರುವ ಶೇಖ್ ಅಬ್ದುಲ್ಲಾ ಅಲ್-ಮೊತ್ಲಾಖ್ ಅವರು ಸೌದಿ ಮಹಿಳೆಯರಿಗೆ ತಮ್ಮ ಗಂಡಂದಿರ ಮೊಬೈಲ್ ತಪಾಸಣೆ ಮಾಡದಂತೆ ಎಚ್ಚರಿಸಿದ್ದಾರಲ್ಲದೆ ಇಂತಹ ಕೃತ್ಯಗಳು ಶೇ. 30 ರಷ್ಟು ವಿಚ್ಛೇದನ ಪ್ರಕರಣಗಳಿಗೆ ಕಾರಣವಾಗಿದೆಯೆಂದು ಹೇಳಿದ್ದಾರೆ.

ಹಿರಿಯ ವಿದ್ವಾಂಸರ ಮಂಡಳಿಯ ಸದಸ್ಯರೂರಾಯಲ್ ಕೋರ್ಟಿನ ಸಲಹಾಗಾರರೂ ಆಗಿರುವ ಅಬ್ದುಲ್ಲಾ, ಗಂಡಂದಿರ ಮೊಬೈಲ್ ತಪಾಸಣೆ ಮಾಡುವುದು ಗೂಢಾಚಾರಿಕೆಗೆ ಸಮವೆಂದು ಹೇಳಿದರಲ್ಲದೆ, ಅದನ್ನು ಅನುಮತಿಸಲು ಸಾಧ್ಯವಿಲ್ಲವೆಂದಿದ್ದಾರೆ. ಅಂತೆಯೇ ಗಂಡಂದಿರು ಕೂಡ ತಮ್ಮ ಪತ್ನಿಯರ ಮೊಬೈಲ್ ಫೋನುಗಳನ್ನು ಗೂಢಾಚಾರಿಕೆ ನಡೆಸಬಾರದೆಂದು ಅವರು ಹೇಳಿದ್ದಾರೆ.

ಪತ್ನಿಯರಿಗೆ ಇಷ್ಟವಾಗದ ಕೆಲವು ವಿಚಾರಗಳು ಗಂಡಂದಿರ ಮೊಬೈಲ್ ಫೋನುಗಳಲ್ಲಿರಬಹುದು ಎಂದು ಹೇಳಿದ ಅವರು ‘‘ಗೂಢಾಚಾರಿಕೆ ‘ಹರಾಮ್’ ಆಗಿದ್ದು ಸಮಸ್ಯೆಗಳನ್ನು ತಂದೊಡ್ಡಬಹುದು. ಅದು ದೊಡ್ಡ ಪಾಪವೂ ಹೌದು’’ಎಂದಿದ್ದಾರೆ.

ಅಲ್-ಇಫ್ತಾ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪತಿ-ಪತ್ನಿಯರು ಪರಸ್ಪರ ಗೂಢಾಚಾರಿಕೆ ನಡೆಸುವ ಬದಲು ಒಬ್ಬರ ಮೇಲೊಬ್ಬರು ವಿಶ್ವಾಸವಿರಿಸಬೇಕು ಎಂದಿದ್ದಾರೆ. ಪತ್ನಿಯರು ಅನಗತ್ಯ ಖರ್ಚುವೆಚ್ಚ ಮಾಡದೆ ಗಂಡಂದಿರು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಜಾಗರೂಕತೆಯಿಂದ ಖರ್ಚು ಮಾಡಬೇಕೆಂದು ಅವರು ಹೇಳಿದರು.

ಸೌದಿಯ ನ್ಯಾಯ ಸಚಿವಾಲಯವು ಸದ್ಯದಲ್ಲಿಯೇ ಜೀವನಾಂಶ ನಿಧಿಯನ್ನು ಸ್ಥಾಪಿಸಲಿದ್ದು, ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದಿರುವ ಸಮಯದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಜೀವನಾಂಶ ನೀಡಲಾಗುವುದಲ್ಲದೆ, ತಮ್ಮನ್ನೂ ತಮ್ಮ ಮಕ್ಕಳನ್ನೂ ಸಲಹಲು ಸಾಧ್ಯವಿಲ್ಲದ ದಂಪತಿಗೂ ಸಹಾಯ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News