ಮಕ್ಕಾ : ಕಾಬಾ ಕಾಣುವ ರೂಮ್‌ಗೆ 37 ಲಕ್ಷ ರೂ. ಬಾಡಿಗೆ !
ಜಿದ್ದಾ, ಜೂ.30: ರಮಝಾನ್ ತಿಂಗಳ ಕೊನೆಯ 10 ದಿನಗಳಲ್ಲಿ ಪವಿತ್ರ ಕಾಬಾ ಕಾಣುವಂತಿರುವ ಹೊಟೇಲ್ ರೂಮ್ ಪಡೆಯಲು ಇಬ್ಬರು ಯಾತ್ರಾರ್ಥಿಗಳು 70,000 ರಿಂದ 2,00,000 ಸೌದಿ ದಿರಂ (37 ಲಕ್ಷ ರೂ.) ಬಾಡಿಗೆ ಪಾವತಿಸಬೇಕಾಗಿದೆ. ಈ ಮೊತ್ತದಲ್ಲಿ ಊಟದ ವೆಚ್ಚವೂ ಸೇರಿದೆ. ಗ್ರಾಂಡ್ ಮಸೀದಿ ಕಾಣಿಸದೇ ಇರುವ ರೂಮ್ ಪಡೆಯಬೇಕಾದರೆ ಯಾತ್ರಾರ್ಥಿಗಳು 37,000 ರಿಂದ 45,000 ಸೌದಿ ದಿರಂ ಪಾವತಿಸಬೇಕೆಂದು ಕಾಬಾದ ಎದುರು ಇರುವ ಹೊಟೇಲ್ ಒಂದರ ಬುಕ್ಕಿಂಗ್ ಏಜೆಂಟ್ ಅಬ್ದುಲ್ಲಾ ಅಲ್-ಅಮೀರಿ ತಿಳಿಸಿದ್ದಾರೆ.
ರಮಝಾನ್ ತಿಂಗಳ ಆರಂಭದಿಂದ ಕೆಲ ಸ್ಥಿತಿವಂತರು ಗ್ರಾಂಡ್ ಮಸೀದಿ ಕಾಣಿಸುವಂತಹ ಹೋಟೆಲಿನಲ್ಲಿ ತಮ್ಮ ರೂಮುಗಳನ್ನು ಕಾಯ್ದಿರಿಸಿದ್ದಾರೆ. ವಿಶೇಷವಾಗಿ ಪವಿತ್ರ ಕಾಬಾದ ಪಶ್ಚಿಮ ಹಾಗೂ ದಕ್ಷಿಣ ಭಾಗಗಳು ಕಾಣುವಂತಹ ಹೊಟೇಲ್ ರೂಮುಗಳಿಗೆ ಬೇಡಿಕೆಯಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ರಮಝಾನ್ ತಿಂಗಳ ಕೊನೆಯ ಹತ್ತು ದಿನಗಳಿಂದ ಹಲವು ಶ್ರೀಮಂತರು ಮಕ್ಕಾ ನಗರಕ್ಕೆ ಭೇಟಿ ನೀಡುವುದರಿಂದ ಹೋಟೆಲುಗಳು ಗ್ರಾಹಕರನ್ನು ಸೆಳೆಯಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡುತ್ತವೆ. ಪವಿತ್ರ ಮಸೀದಿ ಕಾಣಿಸುವಂತಿರುವ ಎಲ್ಲಾ ಪಂಚತಾರಾ ಹೋಟೆಲುಗಳಿಗೆ ಈ ಅವಧಿಯಲ್ಲಿ ತಮ್ಮ ಬಾಡಿಗೆ ಹೆಚ್ಚಿಸಿದರೂ ದಂಡ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ. ಇದೇ ಕಾರಣದಿಂದ ಹೋಟೆಲುಗಳು ತಾವು ಅತ್ಯುತ್ತಮ ಸೌಲಭ್ಯ, ಆಹಾರ ಹಾಗೂ ಸಹಾಯಕರನ್ನೂ ಒದಗಿಸುವುದಾಗಿ ಹೇಳಿಕೊಂಡು ಗ್ರಾಹಕರನ್ನು ಸೆಳೆಯುತ್ತವೆ.
ಮೇಲೆ ತಿಳಿಸಿದ ಅವಧಿಯಲ್ಲಿ ಹೋಟೆಲ್ ಕೋಣೆಯೊಂದರಲ್ಲಿ ಹೆಚ್ಚುವರಿ ಬೆಡ್ ಹಾಕಿಸಿದಲ್ಲಿ ಗ್ರಾಹಕರು 5,000 ಸೌದಿ ದಿರಂ ಹೆಚ್ಚು ಪಾವತಿಸಬೇಕು. ‘‘ಈ ಸಂದರ್ಭ ಮಕ್ಕಾಗೆ ಆಗಮಿಸುವ ಶ್ರೀಮಂತರು ವಿವಿಧ ದೇಶಗಳವರಾದರೂ, ಅವರಲ್ಲಿ ಹೆಚ್ಚಿನವರು ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತಾರೆ. ಅರಬ್ ಗಳು ಹಾಗೂ ವಿದೇಶೀಯರು ಹಾಗೂ ಖ್ಯಾತ ಶೇಖ್‌ಗಳು ಆಗಮಿಸುತ್ತಾರೆ,’’ ಎಂದು ಅಲ್-ಅಮೀರಿ ಹೇಳುತ್ತಾರೆ.