ಅಬುಧಾಬಿ: ಸಂಬಳ ಸಿಗದೆ 160 ಮಂದಿ ಅತಂತ್ರ ಸ್ಥಿತಿಯಲ್ಲಿ!
ಅಬುಧಾಬಿ,ಜುಲೈ 12: ಅಬುಧಾಬಿ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಇಲೆಕ್ಟ್ರೋ-ಮೆಕ್ಯಾನಿಕಲ್ ಕ್ಯಾಟರಿಂಗ್ ಕಂಪೆನಿಯ ನೌಕರರಿಗೆ ಎಂಟು ತಿಂಗಳಿಂದ ಸಂಬಳ ಸಿಗದೆ ಕಷ್ಟಪಡುತ್ತಿದ್ದಾರೆಂದು ವರದಿಯಾಗಿದೆ. ಸಂಬಳ ಸಿಗದಿದ್ದರಿಂದ ಊರಿಗೆ ಬರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು ಇವರಲ್ಲಿ ಬಾಂಗ್ಲಾದೇಶೀಯರು ಮತ್ತು ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 160 ಮಂದಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಇವರಲ್ಲಿ 25 ಮಂದಿಗೆ ವೀಸಾ ಸ್ಟಾಂಪ್ ಕೂಡಾ ಮಾಡಿಕೊಟ್ಟಿಲ್ಲ ಎನ್ನಲಾಗುತ್ತಿದೆ. ವೀಸಾದ ಅವಧಿ ಮುಗಿದವರೂ ಇವರಲ್ಲಿದ್ದಾರೆ. ಊರಿಗೆ ಮರಳುವಾಗ ಭಾರೀ ಮೊತ್ತದ ದಂಡ ತೆರಬೇಕಾಗಬಹುದೆಂಬ ಭಯ ಇವರನ್ನು ಕಾಡುತ್ತಿದೆ. ಕಂಪೆನಿಯ ಅಧಿಕಾರಿಗಳು ಕಂಪೆನಿ ನಷ್ಟದಲ್ಲಿದೆ ಆದ್ದರಿಂದ ಸಂಬಳ ನೀಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇದೇ ಕಂಪೆನಿಯ ಸಹ ಸಂಸ್ಥೆಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತಿದೆ.ದುಬೈ ಸಹಿತ ನಾಲ್ಕು ಕಂಪೆನಿಗಳು ಕೇರಳೀಯರ ಮಾಲಕತ್ವದ್ದಾಗಿದ್ದು ಈ ಕಂಪೆನಿಯ ಮಾಲಕ ಜೈಲಿನಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ. ಸಂಬಳ ನೀಡದೆ ಊರಿಗೆ ಕಳುಹಿಸುವ ತಂತ್ರವಿದೆಂದು ಕೆಲವರು ಹೇಳುತ್ತಿದ್ದಾರೆ. ಒಪ್ಪಂದಕ್ಕೆ ಸಹಿಹಾಕಿದವರಿಗೂ ಒಪ್ಪಂದದ ಪ್ರಕಾರ ಕಂಪೆನಿ ಹಣ ಪಾವತಿಸಿಲ್ಲ ಎಂದು ವರದಿಯಾಗಿದೆ.