ಯುಎಇ: ಹಜ್ ಯಾತ್ರಿಕರಿಗಾಗಿ ಆರೋಗ್ಯ ಸುರಕ್ಷಾ ಅಭಿಯಾನ

Update: 2016-08-01 15:58 GMT

ದುಬೈ, ಆ. 1: ಯುಎಇಯ ಆರೋಗ್ಯ ಸಚಿವಾಲಯವು ಅಬುಧಾಬಿ ಆರೋಗ್ಯ ಪ್ರಾಧಿಕಾರ ಮತ್ತು ದುಬೈ ಆರೋಗ್ಯ ಪ್ರಾಧಿಕಾರಗಳ ಸಹಯೋಗದಲ್ಲಿ ಹಜ್ ಯಾತ್ರಿಕರಿಗಾಗಿ ಆರೋಗ್ಯ ಮತ್ತು ಸುರಕ್ಷಾ ಜಾಗೃತಿ ಅಭಿಯಾನವೊಂದಕ್ಕೆ ಸೋಮವಾರ ಚಾಲನೆ ನೀಡಿದೆ.

ಈ ಬಾರಿ ಯುಎಇಯಿಂದ 5,000ಕ್ಕೂ ಅಧಿಕ ಯಾತ್ರಿಗಳು ಹಜ್‌ಗಾಗಿ ಸೌದಿ ಅರೇಬಿಯಕ್ಕೆ ತೆರಳಲಿದ್ದಾರೆ. ಯಾತ್ರಿಗಳು ‘ಮೆನಿಂಗೊಕೋಕ್ಸಲ್’ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ‘ನ್ಯುಮೋಕೋಕ್ಸಲ್’ ಮತ್ತು ‘ಇನ್‌ಫ್ಲುಯೆಂಝ’ ಲಸಿಕೆಗಳನ್ನೂ ಶಿಫಾರಸು ಮಾಡಲಾಗಿದೆ.

ಅಬುಧಾಬಿಯಲ್ಲಿ ಎಲ್ಲ ಹಜ್ ಯಾತ್ರಿಗಳಿಗೆ ಉಚಿತವಾಗಿ ಲಸಿಕೆಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ವೇಳೆ, ಆರೋಗ್ಯ ಸಚಿವಾಲಯದ ಆರೋಗ್ಯ ಕಾರ್ಡ್‌ಗಳನ್ನು ಹೊಂದಿದವರಿಗೂ ಲಸಿಕೆಗಳನ್ನು ಉಚಿತವಾಗಿ ಹಾಕಲಾಗುವುದು.

ದುಬೈಯಲ್ಲಿ ನಿರ್ದಿಷ್ಟ ವಿಮಾ ಪಾಲಿಸಿಗಳನ್ನು ಹೊಂದಿದವರಿಗೆ ಲಸಿಕೆಗಳನ್ನು ಉಚಿತವಾಗಿ ಹಾಕಲಾಗುವುದು. ಇತರರು ಹಣ ಪಾವತಿಸಬೇಕಾಗುತ್ತದೆ.

 ಕಡ್ಡಾಯವಾಗಿ ಹಾಕಿಸಬೇಕಾದ ‘ಮೆನಿಂಗೊಕೋಕ್ಸಲ್’ ಲಸಿಕೆಯ ಬೆಲೆ 250 ದಿರ್ಹಮ್ (4550 ರೂಪಾಯಿ).

ಲಸಿಕೆಗಳನ್ನು ಪ್ರಯಾಣಕ್ಕಿಂತ ಕನಿಷ್ಠ ಎರಡು ವಾರಗಳ ಮುಂಚೆ ತೆಗೆದುಕೊಳ್ಳಬೇಕು. ಒಂದು ತಿಂಗಳು ಮುಂಚೆಯೂ ತೆಗೆದುಕೊಳ್ಳಬಹುದು. ಆದರೆ, ಪ್ರಯಾಣಕ್ಕಿಂತ ಒಂದು ವಾರ ಮುಂಚೆ ತೆಗೆದುಕೊಳ್ಳಲೇ ಬಾರದು. ಯಾಕೆಂದರೆ, ಅದರಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂಬ ಸಲಹೆಯನ್ನು ಆರೋಗ್ಯ ಅಧಿಕಾರಿಗಳು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News