ಸೌದಿಯಲ್ಲಿ ಭಾರತೀಯ ಕಾರ್ಮಿಕರ ಸಮಸ್ಯೆ : ಭಾರತೀಯ ಮಾಧ್ಯಮಗಳಿಂದ ವೈಭವೀಕರಣ, ಪಕ್ಷಪಾತಿ ವರದಿ
ಜಿದ್ದಾ, ಆ.3: ನಷ್ಟದಲ್ಲಿರುವ ಖಾಸಗಿ ಕಂಪೆನಿಯೊಂದು ಹಾಗೂ ಅದರ ಭಾರತೀಯ ಉದ್ಯೋಗಿಗಳ ನಡುವಿನ ಸಮಸ್ಯೆಯನ್ನು ವೈಭವೀಕರಿಸಿ ಭಾರತೀಯ ಮಾಧ್ಯಮಗಳು ಪಕ್ಷಪಾತಿ ವರದಿ ಮಾಡುತ್ತಿವೆಯೆಂದು ಸೌದಿಯಲ್ಲಿನ ಭಾರತೀಯ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದೊಂದು ಪ್ರತ್ಯೇಕ ಪ್ರಕರಣವಾಗಿದ್ದು ಸುಮಾರು 30 ಲಕ್ಷ ಭಾರತೀಯರು ಸೌದಿಯಲ್ಲಿ ಉದ್ಯೋಗ ಮಾಡಿಕೊಂಡು ಸಂತಸದಿಂದಿದ್ದಾರೆಂದು ಅಲ್ಲಿನ ಭಾರತೀಯ ಸಮುದಾಯ ಹೇಳಿದೆಯಲ್ಲದೆ, ಅತ್ಯಧಿಕ ಸಂಖ್ಯೆಯ ಅನಿವಾಸಿ ಭಾರತೀಯರಿಗೆ ಉದ್ಯೋಗ ದೊರಕಿಸಿದ್ದಕ್ಕಾಗಿ ಹಾಗೂ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವ ಸೌದಿ ಸರಕಾರಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಸೌದಿಯಲ್ಲಿನ ಅನಿವಾಸಿಗಳಲ್ಲಿ ಭಾರತೀಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರಲ್ಲದೆ, ಜಗತ್ತಿನ ಇತರೆಡೆಗಳಿಗಿಂತ ಹೆಚ್ಚಿನ ಸಂಖ್ಯೆಯ ಭಾರತೀಯ ಪಾಸ್ ಪೋರ್ಟ್ ಹೊಂದಿರುವವರು ಕೂಡ ಸೌದಿಯಲ್ಲೇ ಇದ್ದಾರೆ.
ಕೆಲ ನಿರ್ಮಾಣ ಕಂಪೆನಿಗಳು ಆರ್ಥಿಕ ಸಮಸ್ಯೆಯಿಂದಾಗಿ ಭಾರತೀಯರಲ್ಲದೆ ವಿವಿಧ ರಾಷ್ಟ್ರಗಳ ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಅರಬ್ ನ್ಯೂಸ್‌ನೊಂದಿಗೆ ಮಾತನಾಡುತ್ತಾ ತಿಳಿಸಿದ ಅಖ್ತಾರ್-ಉಲ್-ಇಸ್ಲಾಂ ಸಿದ್ಧೀಖೀ ಎಂಬ ಭಾರತೀಯ ಉದ್ಯಮಿ ‘‘ಭಾರತೀಯ ಮಾಧ್ಯಮ ಈ ವಿಚಾರವನ್ನು ಯಾಕೆ ವೈಭವೀಕರಿಸುತ್ತಿದೆ ಎಂದು ತಿಳಿದಿಲ್ಲ’’ ಎಂದು ಹೇಳಿದರು.
‘‘ಭಾರತದಲ್ಲಿ ಖಾಸಗಿ ಸಂಸ್ಥೆಗಳಾದ ಕಿಂಗ್ ಫಿಶರ್, ಸಹಾರ ಮತ್ತಿತರ ಕಂಪೆನಿಗಳು ದಿವಾಳಿಯಾಗಿ ಅವುಗಳ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಭಾರತ ಸರಕಾರ ಅವರಿಗೆಲ್ಲಾ ಉದ್ಯೋಗ ನೀಡಿದೆಯೇನು ? ತಮ್ಮ ಉದ್ಯೋಗಿಗಳಿಗೆ ಸಹಾಯ ಮಾಡುವುದು ಬಿಡಿ, ಕಿಂಗ್ ಫಿಶರ್ ಮಾಲಕ ವಿಜಯ್ ಮಲ್ಯ ಸಾಲ ಮರುಪಾವತಿಸುವುದನ್ನು ತಪ್ಪಿಸುವ ಸಲುವಾಗಿ ಭಾರತದಿಂದಲೇ ಪರಾರಿಯಾದರೂ ಸರಕಾರಕ್ಕೆ ಅವರನ್ನು ಇಲ್ಲಿಯ ತನಕ ಹಿಡಿಯಲು ಸಾಧ್ಯವಾಗಿಲ್ಲ,’’ ಎಂದು ಅವರು ವಿವರಿಸಿದರು.
‘‘ಇಲ್ಲಿನ ಭಾರತೀಯರು ಉದ್ಯೋಗವಿಲ್ಲದೆ ಹಸಿವಿನಿಂದ ಕಂಗಾಲಾಗಿದ್ದಾರೆಂಬ ವಿಷಯದಲ್ಲಿ ವರದಿ ಮಾಡಿ ಏನೂ ಪ್ರಯೋಜನವಿಲ್ಲ. ಬಾಧಿತರಾದವರು ತಮ್ಮ ಮಾಲಕರೊಂದಿಗೆ ಸೇರಿ ಸಮಸ್ಯೆ ಪರಿಹರಿಸಿ ಸ್ವದೇಶಕ್ಕೆ ಮರಳಬಹುದು,’’ ಎನ್ನುತ್ತಾರೆ ಅಬ್ದುಲ್ಲಾಖ್ ಬಸ್ತವಿ ಎಂಬ ಭಾರತೀಯ ಮೂಲದ ಐಟಿ ತಜ್ಞ. ‘‘ಕಾರ್ಮಿಕ ವಿವಾದಗಳ ವಿಚಾರದಲ್ಲಿ ನೌಕರರು ನ್ಯಾಯಾಲಯದ ಮೊರೆ ಹೋಗಬಹುದು,’’ ಎಂದು ಅವರು ತಿಳಿಸಿದರು.
ಇಲ್ಲಿನ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವ ಮೋಜಿಬ್ ಸಿದ್ಧೀಖಿ ಹೀಗೆಂದು ಹೇಳುತ್ತಾರೆ : ‘‘ಭಾರತದಲ್ಲಿ ಬಡ ಮುಸ್ಲಿಮರು ಹಾಗೂ ದಲಿತರ ವಿರುದ್ಧ ಗಂಭೀರ ದೌರ್ಜನ್ಯಗಳು ವರದಿಯಾಗಿವೆ. ಇದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಕಡಿವಾಣ ಹಾಕಬೇಕಿದೆ. ಅದರ ಬದಲು ಭಾರತೀಯ ಮಾಧ್ಯಮ ಇಲ್ಲಿನ ಕಾರ್ಮಿಕ ಸಮಸ್ಯೆಗಳ ಬಗ್ಗೆ ವರದಿಗಳನ್ನು ಪ್ರಕಟಿಸಿ ಉದ್ದೇಶಪೂರ್ವಕವಾಗಿ ಇತ್ತೀಚಿಗಿನ ದೌರ್ಜನ್ಯ ಪ್ರಕರಣಗಳಿಂದ ಟೀಕೆ ಎದುರಿಸುತ್ತಿರುವ ಸರಕಾರದಿಂದ ಜನರ ಗಮನವನ್ನು ಬೇರೆಡೆ ಹರಿಸಲು ಯತ್ನಿಸುತ್ತಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮುಸ್ಲಿಮರ ಬಗ್ಗೆ ತಮಗೆ ಕಾಳಜಿಯಿದೆಯೆಂದು ತೋರಿಸುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ತಂತ್ರ ಇದಾಗಿದೆ’’ಎಂದು ಅವರು ಹೇಳಿದರು.
‘‘ಸೌದಿಯಲ್ಲಿ ಭಾರತೀಯ ವಲಸಿಗರ ಸಮಸ್ಯೆ ಬಿಗಡಾಯಿಸಿದೆಯೆಂದಾದಲ್ಲಿ ಇಲ್ಲಿನ ಅನಿವಾಸಿ ಭಾರತೀಯರಿಂದ ದೇಶಕ್ಕೆ ರವಾನೆಯಾಗುವ ಹಣ ಅತ್ಯಧಿಕವಾಗಿರಲು ಹೇಗೆ ಸಾಧ್ಯ?’’ ಎಂದೂ ಅವರು ಪ್ರಶ್ನಿಸಿದ್ದಾರೆ.
‘‘ಭಾರತ ಸರಕಾರ ಅಲ್ಲಿನ ಮುಸ್ಲಿಮರು ಹಾಗೂ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿಯಿದೆಯೆಂದಾದಲ್ಲಿ ಅದು ಮೊದಲು ಗೋ ರಕ್ಷಣೆಯ ಹೆಸರಿನಲ್ಲಿ ಸಮಾಜ ವಿದ್ರೋಹಿ ಶಕ್ತಿಗಳು ನಡೆಸುವ ವಿಧ್ವಂಸಕ ಕೃತ್ಯಗಳನ್ನು ನಿಲ್ಲಿಸಲಿ’’ ಎಂದು ನೇಮಕಾತಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ದಮ್ಮಾಮ್ ನಿವಾಸಿ ಸಾಖಿಬ್ ಹಂಝ ಹೇಳಿದ್ದಾರೆ.
‘‘ಭಾರತೀಯ ಮಾಧ್ಯಮ ಸೌದಿಯಲ್ಲಿ ಕೆಲಸ ಕಳೆದುಕೊಂಡಿರುವವರ ಸಂಖ್ಯೆಯನ್ನು ಉತ್ಪ್ರೇಕ್ಷಿಸಿದೆ ಎಂದು ಸಫತ್ ಏವ್ಯೇಶನ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಮುಹಮ್ಮದ್ ಅಕ್ರಮ್ ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಯಲ್ಲಿರುವ ಸಂಸ್ಥೆಯೊಂದು ನೌಕರರನ್ನು ಕೆಲಸದಿಂದ ತೆಗೆದು ಹಾಕುವುದು ಹೊಸತೇನಲ್ಲ’’ ಎಂದು ಹೇಳಿದ ಅವರು ಆರ್ಥಿಕ ಕಾರಣಗಳಿಗಾಗಿ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಹಲವಾರು ಸಂಸ್ಥೆಗಳು ಭಾರತದಲ್ಲಿವೆ ಎಂದೂ ವಿವರಿಸಿದ್ದಾರೆ.
courtesy : Arab News