ಸೌದಿ:ಮೊಬೈಲ್ ಕ್ಷೇತ್ರ ಬಿಡಲು ವಲಸಿಗರಿಗೆ ಸೆ.2ರ ಅಂತಿಮ ಗಡುವು

Update: 2016-08-04 17:00 GMT

ಆಭಾ,ಆ.4: ದೇಶದಲ್ಲಿ ದೂರಸಂಪರ್ಕ ಕ್ಷೇತ್ರವನ್ನು ಸಂಪೂರ್ಣವಾಗಿ ಸೌದೀಕರಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಪುನರುಚ್ಚರಿಸಿದೆ.
ನಿರ್ಧಾರದ ಅನುಷ್ಠಾನವನ್ನು ಮುಂದೂಡುವ ಅಥವಾ ಮೊಬೈಲ್ ಅಂಗಡಿಗಳ ಮಾಲಕರಿಗೆ ನೀಡಲಾಗಿರುವ ಅಂತಿಮ ಗಡುವನ್ನು ವಿಸ್ತರಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಮುಫ್ರಜಲ್ ಹಕ್ಬಾನಿ ಅವರು ಒಕಾಝ್/ಸೌದಿ ಗೆಝೆಟ್‌ಗೆ ತಿಳಿಸಿದರು.
ಅಂತಿಮ ಗಡುವನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸುವಂತೆ ಹಲವಾರು ಹೂಡಿಕೆದಾರರು ಮಾಡಿರುವ ಆಗ್ರಹಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಸೆ.2ರ ಅಂತಿಮ ಗಡುವಿನ ಬಳಿಕ ಮೊಬೈಲ್ ಕ್ಷೇತ್ರದಲ್ಲಿ ಯಾವುದೇ ವಲಸಿಗರಿರಕೂಡದು. ಈ ಕ್ಷೇತ್ರದಲ್ಲಿನ ಎಲ್ಲ ಉದ್ಯೋಗಿಗಳು ಸೌದಿ ಪುರುಷರು ಮತ್ತು ಮಹಿಳೆಯರೇ ಆಗಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ತನ್ಮಧ್ಯೆ ಸೌದೀಕರಣದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೌದಿಯ ವಿವಿಧ ಭಾಗಗಳಲ್ಲಿ 1,692 ಮೊಬೈಲ್ ಫೋನ್ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ಈ ನಡುವೆ ಎಲ್ಲ ಉದ್ಯೋಗಿಗಳು ಸೌದಿ ಮಹಿಳೆಯರೇ ಆಗಿರುವ ಮೊದಲ ಮೊಬೈಲ್ ಫೋನ್ ಮಳಿಗೆ ರಿಯಾದ್‌ನಲ್ಲಿ ರವಿವಾರದಿಂದ ಕಾರ್ಯಾಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News