×
Ad

ಹಜ್, ಉಮ್ರಾ ಯಾತ್ರಿಕರಿಗೆ ಶುಭ ಸುದ್ದಿ

Update: 2016-08-09 12:36 IST

ಜಿದ್ದಾ, ಆ.9: ಸೌದಿ ಅರೆಬಿಯದಲ್ಲಿ ವೀಸಾ ಶುಲ್ಕವನ್ನು ಪರಿಷ್ಕರಿಸಲಾಗಿದೆಯೆಂದು ದೇಶದ ಸಚಿವ ಸಂಪುಟ ಘೋಷಿಸಿದೆ. ಹಜ್ ಅಥವಾ ಉಮ್ರಾ ಯಾತ್ರೆಗೆ ಪ್ರಥಮ ಬಾರಿ ಆಗಮಿಸುವ ಎಲ್ಲಾ ಯಾತ್ರಾರ್ಥಿಗಳ ವೀಸಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆಯಲ್ಲದೆ, ಆ ಶುಲ್ಕವನ್ನು ಸೌದಿ ಸರಕಾರವೇ ಭರಿಸುವುದು.

ಪರಿಷ್ಕೃತ ಶುಲ್ಕದಂತೆ ಪ್ರತಿಯೊಂದು ಸಿಂಗಲ್ ಎಂಟ್ರಿ ವೀಸಾಗೆ 2,000 ಸೌದಿ ರಿಯಾಲ್ ಪಾವತಿಸಬೇಕಿದ್ದು ಇದು ಪ್ರಥಮ ಬಾರಿ ತೆರಳುವ ಯಾತ್ರಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಯಾತ್ರಾರ್ಥಿಗಳಿಗೂ ಅನ್ವಯಿಸುತ್ತದೆ.

ಆರು ತಿಂಗಳ, ಒಂದು ವರ್ಷ ಹಾಗೂ ಎರಡು ವರ್ಷ ಅವಧಿಯ ಮಲ್ಟಿಪಲ್ ಎಂಟ್ರಿ ವೀಸಾಗೆ ಯಾತ್ರಾರ್ಥಿಗಳು ಕ್ರಮವಾಗಿ 3,000, 5,000 ಹಾಗೂ 8,000 ಸೌದಿ ರಿಯಾಲ್ ಪಾವತಿಸಬೇಕಿದೆ. ಆದರೆ ಸೌದಿ ಅರೆಬಿಯ ಕೆಲವೊಂದು ದೇಶಗಳೊಂದಿಗೆ ಸಹಿ ಹಾಕಿರುವ ದ್ವಿಪಕ್ಷೀಯ ಒಪ್ಪಂದಗಳಿಗೆ ಈ ಪರಿಷ್ಕರಣೆ ಅನ್ವಯಿಸುವುದಿಲ್ಲ.

ಪರಿಷ್ಕೃತ ಟ್ರಾನ್ಸಿಟ್ ವೀಸಾ ಶುಲ್ಕ 300 ಸೌದಿ ರಿಯಾಲ್‌ಗಳಾಗಿದ್ದು ಸಮುದ್ರದ ಮೂಲಕ ದೇಶದಿಂದ ತೆರಳುವವರು 50 ಸೌದಿ ರಿಯಾಲ್‌ಎಕ್ಸಿಟ್ ವೀಸಾ ಶುಲ್ಕ ಪಾವತಿಸಬೇಕಾಗಿದೆ. ಈ ಪರಿಷ್ಕೃತ ಶುಲ್ಕ 2016ರ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

ತರುವಾಯ ರೆಸಿಡೆನ್ಸ್ ಪರ್ಮಿಟ್ (ಇಖಾಮ) ಇದಕ್ಕಾಗಿ ಎಕ್ಸಿಟ್ ಹಾಗೂ ರಿ-ಎಂಟ್ರಿ ವೀಸಾ ಶುಲ್ಕ ಎರಡು ತಿಂಗಳ ಅವಧಿಗೆ (ಸಿಂಗಲ್ ಟ್ರಿಪ್) 300 ಸೌದಿ ರಿಯಾಲ್ ಆಗಿದ್ದು, ರೆಸಿಡೆನ್ಸ್ ಪರ್ಮಿಟ್ ಊರ್ಜಿತದಲ್ಲಿರುವ ತನಕ ಪ್ರತಿ ಹೆಚ್ಚುವರಿ ತಿಂಗಳ ವಾಸಕ್ಕೆ 100 ಸೌದಿ ರಿಯಾಲ್ ಶುಲ್ಕ ವಿಧಿಸಲಾಗುವುದು. ಇದೇ ವಿಭಾಗದ ಮಲ್ಟಿಪಲ್ ಟ್ರಿಪ್‌ಗಳಿಗೆ ಮೂರು ತಿಂಗಳ ಅವಧಿಗೆ 500 ಸೌದಿ ರಿಯಾಲ್ ಶುಲ್ಕ ವಿಧಿಸಲಾಗುವುದಾದರೆ, ರೆಸಿಡೆನ್ಸ್ ಪರ್ಮಿಟ್ ಊರ್ಜಿತದಲ್ಲಿರುವ ತನಕ ಪ್ರತಿ ಹೆಚ್ಚುವರಿ ತಿಂಗಳು ವಾಸಕ್ಕೆ 200 ಸೌದಿ ರಿಯಾಲ್ ಶುಲ್ಕ ಪಾವತಿ ಮಾಡಬೇಕಾಗಿದೆ.

ರಾಜಕುಮಾರ ಮುಹಮ್ಮದ್ ಬಿನ್ ನಯೇಫ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸೌದಿ ಸಚಿವ ಸಂಪುಟದ ಸಭೆಯಲ್ಲಿ ಮೇಲಿನ ಮಾಹಿತಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News