ಈ ಮಗು ಸತ್ತು ಬದುಕಿತು!
ದುಬೈ, ಆ.16: "ನಿನ್ನ ಪೋಷಕರು ನಿನಗಾಗಿ ಕಾಯುತ್ತಿದ್ದಾರೆ; ನೀನು ವಾಪಾಸು ಹೋಗಲೇಬೇಕು"
ಈ ವಾಕ್ಯದ ಶಕ್ತಿ, ಎರಡೂವರೆ ವರ್ಷದ ಪುಟ್ಟ ಬಾಲಕ ಆಧಿ ಥೊಪ್ಪಿಲ್ ಫಬೀರ್‌ನ ಕಿವಿಗೆ ಕೇಳಿಸಿತು. ಆತನನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಕರೆದೊಯ್ಯುತ್ತಿರುವ ವೈದ್ಯರು ಆತ ಬದುಕಿ ಉಳಿಯುವ ಸಾಧ್ಯತೆ ತೀರಾ ವಿರಳ ಎಂದು ಹೇಳಿದ್ದರು. ಆ ಶಬ್ದಗಳು ಆತನಿಗೆ ಮರು ಹುಟ್ಟು ನೀಡಿದವು ಎನ್ನುವುದು ತಂದೆಯ ಉದ್ಘೋಷ.
ಈ ಪುಟ್ಟ ಬಾಲಕನ ಬದುಕುವ ಛಲ ವೈದ್ಯರನ್ನೇ ನಿಬ್ಬೆರಗುಗೊಳಿಸಿತು. ಈತ ಬದುಕುವ ಸಲುವಾಗಿ ಸತ್ತ ಬಾಲಕ. ಆತನ ಇಡೀ ಹೃದಯವನ್ನು ನುಂಗಿಹಾಕಿದ್ದ ಟ್ಯೂಮರನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಾದರೆ, ಆತನ ಮೆದುಳು ಹಾಗೂ ಹೃದಯವನ್ನು ನಿಷ್ಕ್ರಿಯಗೊಳಿಸಲೇಬೇಕಿತ್ತು. ಹೀಗೆ ಹೊರತೆಗೆದರೂ ಆತ ಬದುಕಿ ಉಳಿಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದರು.
ಈ ಘಟನೆ ನಡೆದದ್ದು ಕಳೆದ ವಾರ. ವಿಶ್ವದಲ್ಲೇ ಇಂಥ ಆರೋಗ್ಯ ಸಮಸ್ಯೆ ಎದುರಿಸಿ ಬದುಕಿ ಬಂದ ಐದನೇ ಬಾಲಕ ಈತ. ಆತನ ಹೃದಯ ಟ್ಯೂಮರ್ ಶಸ್ತ್ರಚಿಕಿತ್ಸೆಗಾಗಿ ಆತನನ್ನು 40 ನಿಮಿಷ ಕಾಲ ಅಕ್ಷರಶಃ ವೈದ್ಯಕೀಯವಾಗಿ ಸಾಯಿಸಲಾಗಿತ್ತು.
ಆತನನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಹೃದಯಕ್ಕೆ ಶೇಕಡ 95ರಷ್ಟು ರಕ್ತ ಪರಿಚಲನೆ ನಿಂತುಹೋಗಿದೆ ಎಂದು ವೈದ್ಯರು ಹೇಳಿದರು. ಸಕಾಲದಲ್ಲಿ ಆತನನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವಿರಳಾತಿವಿರಳ ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಹೈಡ್ರೋಥರ್ಮಿಕ್ ವಿಧಾನದ ಮೂಲಕ ರಕ್ತ ಪರಿಚಲನೆ ನಿಲ್ಲಸುವ ವಿಧಾನ ಅನುಸರಿಸಿದರು. ಈ ವ್ಯವಸ್ಥೆಯಡಿ ದೇಹದ ಉಷ್ಣತೆಯನ್ನು 15 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಮಾಡಲಾಗುತ್ತದೆ. ಸಾಮಾನ್ಯ ಮನುಷ್ಯರ ದೇಹದ ಉಷ್ಣತೆ 37 ಡಿಗ್ರಿ ಸೆಲ್ಷಿಯಸ್ ಇದ್ದು, ಇದು ಶೇಕಡ 22ಕ್ಕಿಂತ ಕಡಿಮೆಯಾದರೆ ಆತ ಸಾಯುತ್ತಾರೆ.
"ವೈದ್ಯರ ಮಾತನ್ನು ಆತ ಶಿರಸಾ ಪಾಲಿಸಿದ, ಆತನ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ" ಎಂದು ಆಧಿ ತಂದೆ ಶಾರ್ಜಾ ಮೂಲದ ಫಬೀರ್ ತೊಪ್ಪಿಲ್ ಸುಬೇರ್ ಸಂತಸದಿಂದ ಹೇಳಿದರು.
ಕಳೆದ ಜೂನ್‌ನಲ್ಲಿ ಫಬೀರ್ ಹಾಗೂ ಆತನ ಮೂವರು ಸಹೋದರರಿಗೆ ವೈರಸ್ ಸೋಂಕು ತಗುಲಿತ್ತು, ಸಹೋದರರು ಚೇತರಿಸಿಕೊಂಡರೂ ಈ ಬಾಲಕ ಚೇತರಿಸಿಕೊಳ್ಳಲೇ ಇಲ್ಲ. ವೈದ್ಯರನ್ನು ಸಂಪರ್ಕಿಸಿದಾಗ ದುಬೈಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.